

ನವದೆಹಲಿ: ನಾನು ನನ್ನ ಫ್ಯಾಕ್ಟರಿಗೆ ಹೋಗಿ ನನ್ನ ಐಷಾರಾಮಿ ಪಾರ್ಷ್ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದೆ. ಆ ಸಂದರ್ಭದಲ್ಲಿ ನನ್ನನ್ನು ಬೇಕೆಂದೇ ತಡೆದ ಪೊಲೀಸರು, ತೋರಿಸಿದ ಪಾಸ್ ಅನ್ನು ಒಪ್ಪದೆ ಬಸ್ಕಿ ಹೊಡೆಸಿ ಅಪಹಾಸ್ಯ ಮಾಡಿದರು ಎಂದು ಇಂದೋರ್ನ ಕೈಗಾರಿಕೋದ್ಯಮಿ ಸಂಸ್ಕಾರ್ ದರ್ಯಾನಿ ಅಲವತ್ತುಕೊಂಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿರುವ ಅವರು, ನಾನು ಕೆಲಸದ ಮೇಲೆ ಫ್ಯಾಕ್ಟರಿಗೆ ಹೋಗಿದ್ದಾಗಿಯೂ, ಅನಗತ್ಯವಾಗಿ ತಿರುಗುತ್ತಿರಲಿಲ್ಲವೆಂದು ಪೊಲೀಸರಿಗೆ ಮನವರಿಕೆ ಮಾಡಿಕೊಡಲು ಸಾಕಷ್ಟು ಪ್ರಯತ್ನಿಸಿದೆ. ಆದರೆ, ಅವರು ನನ್ನ ಮಾತನ್ನು ಕೇಳಿಸಿಕೊಳ್ಳಲು ತಯಾರಿರಲಿಲ್ಲ ಎಂದು ಹೇಳಿದ್ದಾರೆ.
ಇಂದೋರ್ನಲ್ಲಿ ಭಾನುವಾರ ಬೆಳಗ್ಗೆ ಐಷಾರಾಮಿ ಪಾರ್ಷ್ ಕಾರಿನಲ್ಲಿ ಹೋಗುವಾಗ ಸಂಸ್ಕಾರ್ ದರ್ಯಾನಿ ಅವರನ್ನು ಪೊಲೀಸರು ತಡೆದಿದ್ದರು. ಲಾಕ್ಡೌನ್ ಅವಧಿಯಲ್ಲಿ ಅನಗತ್ಯವಾಗಿ ತಿರುಗುತ್ತಿರುವುದಾಗಿಯೂ, ಮಾಸ್ಕ್ ಧರಿಸಿರಲಿಲ್ಲ ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಸಂಸ್ಕಾರ್ ಅವರನ್ನು ಕಾರಿನಿಂದ ಕೆಳಗಿಳಿಸಿದ್ದ ಪೊಲೀಸರು, ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದರು. ಸಿಬ್ಬಂದಿಯ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಇಂದೋರ್ ಎಎಸ್ಪಿ, ಕಾರು ಚಾಲಕ ಮಾಸ್ಕ್ ಧರಿಸಿರಲಿಲ್ಲ. ಹಾಗಾಗಿ ನಮ್ಮ ಸಿಬ್ಬಂದಿ ಅವರಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಅಲ್ಲದೆ, ಅನಗತ್ಯವಾಗಿ ತಿರುಗುವವರನ್ನು ನಮ್ಮ ಸಿಬ್ಬಂದಿ ತಡೆದು ವಿಚಾರಿಸುತ್ತಿದ್ದಾರೆ ಎಂದು ಹೇಳಿದ್ದರು.