

I Love Muhammad: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸರ್ಕಾರ ಅರಾಜಕತೆ ಸೃಷ್ಟಿಸುವುದನ್ನು ಒಪ್ಪುವುದಿಲ್ಲ, ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸುವ ಯಾರಿಗಾದರೂ ನಾವು ಕೇಳದೆಯೇ ನರಕಕ್ಕೆ ಟಿಕೆಟ್ ನೀಡುತ್ತೇವೆ ಎಂದರು.
ಬಲರಾಂಪುರದಲ್ಲಿ 825 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಯೋಗಿ, ಹಬ್ಬಗಳು ಮತ್ತು ಸಾರ್ವಜನಿಕ ಆಚರಣೆಗಳಿಗೆ ಅಡ್ಡಿಪಡಿಸುವವರು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ, ಭವಿಷ್ಯದ ಪೀಳಿಗೆಗಳು ಅದನ್ನು ನೆನಪಿಸಿಕೊಳ್ಳುತ್ತವೆ ಎಂದು ಹೇಳಿದರು.
ನಮ್ಮ ಹೆಣ್ಣುಮಕ್ಕಳ ಸುರಕ್ಷತೆಗೆ ಹಾನಿ ಮಾಡಲು ಮತ್ತು ನಮ್ಮ ಹಬ್ಬಗಳ ಸಮಯದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಕ್ಕೆ ಯಾರಾದರೂ ಕೈ ಹಾಕಿದರೆ ಅಂತಹ ಕೃತ್ಯಗಳನ್ನು ಕ್ಷಮಿಸಲು ಸಾಧ್ಯವಿಲ್ಲ, ಕೆಲವು ವ್ಯಕ್ತಿಗಳು ಉತ್ತರ ಪ್ರದೇಶದ ನೆಮ್ಮದಿಯ ಪರಿಸರವನ್ನು ಹಾಳು ಮಾಡಲು ಹೊಂಚು ಹಾಕುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು, ಅಶಾಂತಿ ಸೃಷ್ಟಿಸುವವರು ನೆನಪಿನಲ್ಲಿಟ್ಟುಕೊಳ್ಳಿ, ನೀವು ಯೋಚಿಸುವುದಕ್ಕಿಂತ ಹೆಚ್ಚು ಸಿದ್ದರಿದ್ದೇವೆ, ನಿಮ್ಮ ಏಟಿಗೆ ತಕ್ಕಂತೆ ನಮ್ಮ ತಿರುಗೇಟು ಇರಲಿದೆ ಎಂದರು. ಶನಿವಾರ ಮಾತನಾಡಿದ್ದ ಮುಖ್ಯಮಂತ್ರಿ ಯೋಗಿ, ಬರೇಲಿಯ ಧರ್ಮಗುರು ರಾಜ್ಯದಲ್ಲಿ ಯಾರು ಅಧಿಕಾರದಲ್ಲಿದ್ದಾರೆ ಎಂಬುದನ್ನು ಮರೆತಿದ್ದಂತಿದೆ ಎಂದಿದ್ದರು.
ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಹಿಂದೂಗಳನ್ನು ದಾರಿ ತಪ್ಪಿಸಲು ಮತ್ತು ಸಮಾಜದ ಕಣ್ಣಿಗೆ ಮಣ್ಣು ಎರಚಲು ಅನೇಕ ರೀತಿಯಲ್ಲಿ ಪ್ರಯತ್ನಿಸಿದ, ತನ್ನ ತಪ್ಪನ್ನು ಮರೆಮಾಡಲು ಹರಸಾಹಸಪಟ್ಟ, ಆದರೆ, ಅವನ ಪಾಪದ ಕೊಡ ತುಂಬಿದ್ದು, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬರೇಲಿಯ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್‌ನ ಮುಖ್ಯಸ್ಥ ಛಂಗೂರ್ ಬಾಬಾ ಮತ್ತು ತೌಕೀರ್ ರಜಾ ಖಾನ್ರಂತಹ ಜನರು ಮೂರ್ಖರು ಎಂದು ಹೇಳಿದರು. ನಂಬಿಕೆ ಎನ್ನುವುದು ಅಡ್ಡದಾರಿಯಲ್ಲಿ ಪ್ರದರ್ಶಿಸುವ ವಿಷಯವಲ್ಲ, ಅದು ಆತ್ಮಸಾಕ್ಷಿಗೆ ಸಂಬಂಧಪಟ್ಟಿದ್ದು, ಕೆಲವರು ಚಿಕ್ಕ ಮಕ್ಕಳಿಗೆ "ಐ ಲವ್ ಮುಹಮ್ಮದ್" ಎಂಬ ಪೋಸ್ಟರ್‌ಗಳನ್ನು ನೀಡುವ ಮೂಲಕ ಸಮಾಜದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದಾರೆ. ತಮ್ಮ ಸ್ವಂತ ಜೀವನವು ಈಗಾಗಲೇ ಹಾಳಾಗಿದೆ ಎಂದು ಅರಿಯದ ಅವರೆಲ್ಲ, ಈಗ ಮಕ್ಕಳ ಜೀವನವನ್ನೂ ಸಹ ಹಾಳುಮಾಡುವ ಹಂತಕ್ಕೆ ಹೋಗುತಿದ್ದಾರೆ ಎಂದರು.(ಏಜೆನ್ಸೀಸ್)