ಪತ್ನಿ ಸಾವಿನ ಬಳಿಕವೂ 30 ವರ್ಷದ ಹರಕೆ ಈಡೇರಿಸಿದ ಪತಿ: ಸಾಯಿಬಾಬಾಗೆ ಚಿನ್ನದ ಕಿರೀಟ ದಾನ

kirita
Published on

ಶಿರಡಿ: ಪತ್ನಿಯ ಆಸೆಯಂತೆ ಹೈದರಾಬಾದ್‌ನ ಭಕ್ತರೊಬ್ಬರು 33 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಸಾಯಿಬಾಬಾಗೆ ಅರ್ಪಿಸಿದ್ದಾರೆ.

ಹೈದರಾಬಾದ್‌ನ ಸಾಯಿಬಾಬಾ ಭಕ್ತರಾದ 80 ವರ್ಷದ ಡಾ. ರಾಮಕೃಷ್ಣ ಅವರು, ಬಾಬಾಗೆ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದಾರೆ. ಈ ಮೂಲಕ ಅವರ ಮೃತ ಪತ್ನಿ ರತ್ನಮ್ಮ ಅವರ ಆಸೆಯನ್ನು ಈಡೇರಿಸಿದ್ದಾರೆ.

707 ಗ್ರಾಂ ತೂಕದ ಸುಮಾರು 33 ಲಕ್ಷ ರೂಪಾಯಿ ಬೆಲೆಬಾಳುವ ಕಿರೀಟವನ್ನು ಬಾಬಾಗೆ ಅರ್ಪಿಸಿದ್ದು, ಇದರಲ್ಲಿ 35 ಗ್ರಾಂ ತೂಕದ ಅಮೆರಿಕನ್ ಡೈಮೆಂಡ್ ನಿಂದ ಅಲಂಕರಿಸಲಾಗಿದೆ.

ದಾನ ಮಾಡಿದ ಕಿರೀಟವು ತುಂಬಾ ಆಕರ್ಷಕವಾಗಿದ್ದು, ಮುಕುಟದ ಮಧ್ಯದಲ್ಲಿ ಓಂ ಎಂದು ಬರೆಸಿದ್ದಾರೆ. ಕಿರೀಟದ ಮೇಲೆ ನವಿಲುಗರಿ ಇಡಲಾಗಿದೆ. ಇಂದು ಮಧ್ಯಾಹ್ನದ ಆರತಿಯ ಸಮಯದಲ್ಲಿ ಸಾಯಿ ಬಾಬಾರವರ ವಿಗ್ರಹಕ್ಕೆ ಈ ಕಿರೀಟವನ್ನು ಇಟ್ಟು ಪೂಜಿಸಲಾಯಿತು.

ಪತ್ನಿಯ ಕೊನೆಯ ಆಸೆ: ಹೈದರಾಬಾದ್​ನ ಸಾಯಿ ಭಕ್ತರಾದ ಡಾ.ರಾಮಕೃಷ್ಣ ಅವರು 1992ರಲ್ಲಿ ತಮ್ಮ ಪತ್ನಿ ಸಾಯಿಬಾಬಾ ದರ್ಶನಕ್ಕಾಗಿ ಶಿರಡಿಗೆ ಬಂದಿದ್ದೆವು. ಅಂದು ಬಂದಾಗ ಬಾಬಾಗೆ ಕಿರೀಟ ಕೊಡುವುದಾಗಿ ಪತ್ನಿ ಹರಸಿಕೊಂಡಿದ್ದಳು. ಆದರೆ, ಆ ಸಂದರ್ಭದಲ್ಲಿ ಹಣದ ಸಮಸ್ಯೆ ಇದ್ದ ಕಾರಣ ಕಿರೀಟ ಮಾಡಿಸಿರಲಿಲ್ಲ. ಅಷ್ಟರಲ್ಲಿ ರತ್ನಮ್ಮ ನಿಧನರಾದರು. ಆದರೆ, ಅವಳ ಆಸೆಯನ್ನು ಈಗ ಈಡೇರಿಸಿದ್ದೇನೆ ಎಂದು ರಾಮಕೃಷ್ಣ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net