ಪತಿಯಿಂದ ಪತ್ನಿಗೆ ಚೂರಿ ಇರಿತ

stabs
Published on

ಉಪ್ಪಿನಂಗಡಿ: ಪತ್ನಿಗೆ ಚೂರಿಯಿಂದ ಇರಿದು ಪತಿ ಪರಾರಿಯಾಗಲೆತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಜೋರುಕಟ್ಟೆ ಎಂಬಲ್ಲಿ ನಡೆದಿದ್ದು, ಚೂರಿ ಇರಿದಾತನನ್ನು ಮನೆ ಮಂದಿ ಪಿಲಿಗೂಡು ಎಂಬಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜೋರುಕಟ್ಟೆ ನಿವಾಸಿ ಮುಹಮ್ಮದ್ ಎಂಬವರ ಪುತ್ರಿ ಸಜರಾ(40) ಹಲ್ಲೆಗೊಳಗಾದವರು. ಈಕೆಯ ಪತಿ ಮಡಂತ್ಯಾರು ಸಮೀಪದ ಕೊಲತ್ತಬೈಲು ಮಾಲಾಡಿ ನಿವಾಸಿ ಹಕೀಂ ಎಂಬಾತ ಹಲ್ಲೆ ನಡೆಸಿದವ. ಹಕೀಂ ಮತ್ತು ಸಜರಾ ಅವರ ವಿವಾಹ 15 ವರ್ಷಗಳ ಹಿಂದೆ ನಡೆದಿದ್ದು, ಮದುವೆಯಾದ ಕೆಲ ವರ್ಷಗಳ ಬಳಿಕ ಹಕೀಂ ಪತ್ನಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದ. ಸಜರಾ ಮೂರು ವರ್ಷದಿಂದ ಜೋರುಕಟ್ಟೆಯಲ್ಲಿರುವ ತವರು ಮನೆಯಲ್ಲಿ ಮಕ್ಕಳೊಂದಿಗೆ ನೆಲೆಸಿದ್ದರು. ಶುಕ್ರವಾರ ಮಧ್ಯಾಹ್ನ ಚೂರಿ ಹಿಡಿದುಕೊಂಡು ಇಲ್ಲಿಗೆ ಬಂದ ಹಕೀಂ ಮೇಲೆ ಹಲ್ಲೆ ಮಾಡಿ ತಡೆಯಲು ಬಂದ ಸಜರಾ ತಂದೆ ಮುಹಮ್ಮದ್ ಅವರ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಮನೆಮಂದಿ ಬೆನ್ನಟ್ಟಿ ಪಿಲಿಗೂಡು ಎಂಬಲ್ಲಿ ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೈ, ಹೊಟ್ಟೆ, ಬೆನ್ನಿನ ಭಾಗಕ್ಕೆ ಗಾಯಗಳಾಗಿರುವ ಸಜರಾ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net