ಕಾಣೆಯಾಗಿದ್ದಾಳೆ ಎಂದು ಮೊಸಳೆ ಕಣ್ಣೀರು ಹಾಕಿದ್ದ ಪತಿರಾಯ ಪತ್ನಿಯನ್ನು ತುಂಡರಿಸಿ ಹೂತು ಹಾಕಿದ್ದ..!

crime
Published on

ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಪತ್ನಿಯನ್ನು ಕೊಲೆ ಮಾಡಿ ಶವವನ್ನು ತುಂಡರಿಸಿ ಹೂತು ಹಾಕಿದ್ದ ಪತಿಗೆ ದೊಡ್ಡಬಳ್ಳಾಪುರದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ದೊಡ್ಡಬೆಳವಂಗಲ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ರಾಜೇಶ್ ಶಿಕ್ಷೆಗೆ ಗುರಿಯಾದವರು. ಆತನ ಪತ್ನಿ ಲಕ್ಷ್ಮಿ ಕೊಲೆಯಾದವರು.

ಬೊಮ್ಮನಹಳ್ಳಿಯಲ್ಲಿ 2018 ಫೆ.9 ರಂದು ರಾಜೇಶ ಪತ್ನಿ ಲಕ್ಷ್ಮಿಯನ್ನು ಕೊಲೆ ಮಾಡಿ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಹೂತು ಹಾಕಿದ್ದ. ಬಳಿಕ ದೊಡ್ಡಬೆಳವಂಗಲ ಠಾಣೆಗೆ ಬಂದು ಪತ್ನಿ ಕಾಣೆಯಾಗಿರುವುದಾಗಿ ದೂರು ನೀಡಿದ್ದ. ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ಜಿ.ಸಿದ್ದರಾಜು ತನಿಖೆ ಆರಂಭಿಸಿದ್ದರು. ಅನುಮಾನದ ಹಿನ್ನೆಲೆಯಲ್ಲಿ ಪತಿಯನ್ನು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿತ್ತು.

ಫೆ.9ರಂದು ಬೊಮ್ಮನಹಳ್ಳಿಯ ನೀಲಗಿರಿ ತೋಪಿನಲ್ಲಿ ವೇಲಿನಿಂದ ಪತ್ನಿಯ ಕುತ್ತಿಗೆ ಬಿಗಿದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದ. ಬಳಿಕ ಆಕೆಯ ಮೈಮೇಲಿದ್ದ ಆಭರಣಗಳನ್ನು ಬಿಚ್ಚಿಕೊಂಡು ಶವವನ್ನು ತುಂಡು ತಂಡಾಗಿ ಕತ್ತರಿಸಿ ಗುಂಡಸಂದ್ರ ಗ್ರಾಮದ ಕೆರೆಯ ಗುಂಡಿಯಲ್ಲಿ ಹೂತು ಹಾಕಿದ್ದ.

ದೋಷಾರೋಪ ಪಟ್ಟಿ:
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಂದಿನ ತನಿಖಾಧಿಕಾರಿ ಸಿದ್ದರಾಜು, ಆರೋಪಿ ವಿರುದ್ದ 2018 ಮೇ 17 ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

4ನೇ ಹೆಚ್ಚುವರಿ ಜಿಲ್ಲಾ ಮತು ಸೆಷನ್ಸ್ ನ್ಯಾಯಾಧೀಶ ರಮೇಶ ದುರಗಪ್ಪ ಏಕಬೋಟೆ ಅವರು 2023 ಜ.9 ರಂದು ಆರೋಪಿಗೆ ಐಪಿಸಿ 302 ಸೆಕ್ಷನ್ ಅಡಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ರಂಗಸ್ವಾಮಿ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net