

ಕಲಬುರಗಿ: ಶೀಲ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಂಬಿಕಾ ನಗರದಲ್ಲಿ ನಡೆದಿದೆ. ಫರೀದಾ ಬೇಗಂ(39) ಕೋಲೆಯಾದ ದುರ್ದೈವಿ. ಎಜಾಜ್ ಅಹ್ಮದ್ ಪತ್ನಿಯನ್ನು ಕೊಂದ ಆರೋಪಿ ಪತಿ.
ಆರೋಪಿ ಎಜಾಜ್ ಅಹ್ಮದ್ ಪತ್ನಿಯ ಶೀಲ ಶಂಕಿಸಿ ನಿತ್ಯವೂ ಕಿರುಕುಳ ನೀಡುತ್ತಿದ್ದ. ಈ ವಿಚಾರಕ್ಕೆ ಜಗಳವಾಡುತ್ತಿದ್ದ. ಎಜಾಜ್ ಕಳೆದ 13 ವರ್ಷದ ಹಿಂದೆ ಫರೀದಾ ಬೇಗಂಳೊಂದಿಗೆ ವಿವಾಹವಾಗಿದ್ದ. ಆದರೆ ಅನೈತಿಕ ಸಂಬಂಧ ಹಾಗೂ ವರದಿಕ್ಷಿಣೆ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ.
ಫರೀದಾ ಬೇಗಂ ಮತ್ತು ಎಜಾಜ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಸಿಟ್ಟಾದ ಪತಿ, ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಕೊಲೆಯಾದ ಫರೀದಾ ಬೇಗಂ, ಜಿಲ್ಲೆಯ ಅಫಜಲಪುರ ತಾಲೂಕಿನ ಅತನೂರು ಗ್ರಾಮದಲ್ಲಿರುವ ಸರ್ಕಾರಿ ಆದರ್ಶ ಶಾಲೆಯ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಎಜಾಜ್ ಅಹ್ಮದ್ ಈ ಮೊದಲು ಪೊಲೀಸ್ ಕಾನಸ್ಟೇಬಲ್ ಆಗಿದ್ದು, ಬಳಿಕ ದೈಹಿಕ ಶಿಕ್ಷಣ ಶಿಕ್ಷಕನಾಗಿ ನೇಮಕವಾಗಿದ್ದ.
ಪತಿ-ಪತ್ನಿ ಇಬ್ಬರು ಸರ್ಕಾರಿ ಶಿಕ್ಷಕರಾಗಿದ್ದು, ಪತ್ನಿಗೆ ಶಾಲೆಗೆ ಹೋಗದಂತೆ ನಿತ್ಯ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಘಟನೆಯ ಬಗ್ಗೆ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.