ಅತ್ಯಾಚಾರಕ್ಕೆ ಗಂಡನೇ ದುಷ್ಪ್ರೇರಣೆ ಕಾವೂರು ಠಾಣೆ ಕಾನ್‌ಸ್ಟೇಬಲ್ ಹಾಗೂ ಸಂತ್ರಸ್ತೆ ಪತಿ ಬಂಧನ

mng--16 july Chandra naik
Published on

ಮಂಗಳೂರು: ತೊಂದರೆಗೊಳಗಾದ ಮಹಿಳೆಗೆ ರಕ್ಷಣೆ ನೀಡಬೇಕಾದ ಪೊಲೀಸ್ ಕಾನ್‌ಸ್ಟೇಬಲ್ ಗಂಡನ ದುಷ್ಪ್ರೇರಣೆಯಿಂದ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಕಂಕನಾಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾವೂರು ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಬಾಗಲಕೋಟೆ ಮೂಲದ ಚಂದ್ರ ನಾಯ್ಕ ಹಾಗೂ ಸಂತ್ರಸ್ತೆಯ ಪತಿ ಬಂಧಿತರು.

‘ತನ್ನ ಗಂಡ ಹಣಕ್ಕಾಗಿ ಒತ್ತಾಯಪೂರ್ವಕ ಬೇರೆ ಪುರುಷರೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಮಾಡಿ, ಅದರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಆ ಬಳಿಕ ಇತರರೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಒತ್ತಾಯ ಮಾಡುತ್ತಿದ್ದ. ವಿರೋಧಿಸಿದಾಗ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡುವುದಾಗಿ ಬೆದರಿಕೆಯೊಡ್ಡುತ್ತಿದ್ದ. ಈ ಬಗ್ಗೆ ಪರಿಚಯವಿರುವ ಕಾವೂರು ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಚಂದ್ರನಾಯ್ಕ ಗೆ ತಿಳಿಸಿದಾಗ, ಆತ ಮನೆಗೆ ಬಂದು ಗಂಡನ ಮೊಬೈಲ್‌ನಲ್ಲಿದ್ದ ಪೋಟೋ ಮತ್ತು ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಾನೆ. ನಂತರ ತನ್ನ ಗಂಡನ ದುಷ್ಪ್ರೇರಣೆಯಂತೆ ಚಂದ್ರನಾಯ್ಕ ಕೂಡಾ ನನ್ನೊಂದಿಗೆ ಒತ್ತಾಯ ಪೂರ್ವಕ, ಇಚ್ಚೆಗೆ ವಿರುದ್ದ ದೈಹಿಕ ಸಂಪರ್ಕ ನಡೆಸಿದ್ದ’ ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಮಹಿಳೆ ಈ ಬಗ್ಗೆ ಪೊಲೀಸ್ ಆಯುಕ್ತರನ್ನು ನೇರವಾಗಿ ಭೇಟಿಯಾಗಿ ದೂರು ಹೇಳಿದ್ದರು. ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕಂಕನಾಡಿ ನಗರ ಠಾಣೆಗೆ ಕಳುಹಿಸಿ ಅಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ್ದರು. ಅದರ ಪ್ರಕಾರ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net