ಕಾರು ಸಾಲ ರದ್ದು ಮಾಡಿ...! ಬ್ಯಾಂಕ್​ಗಳಿಗೆ ನೂರಾರು ಗ್ರಾಹಕರ ಕೋರಿಕೆ

car new
Published on

ನವದೆಹಲಿ: ಈಗಾಗಲೇ ಮಂಜೂರಾಗಿರುವ ಕಾರು ಸಾಲಗಳನ್ನು ರದ್ದು ಮಾಡುವಂತೆ ನೂರಾರು ಗ್ರಾಹಕರು ಬ್ಯಾಂಕುಗಳಿಗೆ ಕೋರಿಕೆ ಸಲ್ಲಿಸುತ್ತಿರುವ ಸಂಗತಿ ಬಯಲಾಗಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ ಇತ್ತೀಚೆಗೆ ಸ್ಲ್ಯಾಬ್​ಗಳನ್ನು ಪರಿಷ್ಕರಿಸುವ ತೀರ್ಮಾನ ತೆಗೆದುಕೊಂಡಿದ್ದು, ಕಾರುಗಳ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಪರಿಷ್ಕೃತ ತೆರಿಗೆ ದರಗಳು ಸೆ. 22ರಿಂದ ಜಾರಿಗೆ ಬರಲಿವೆ. ಹಾಗಾಗಿ ಅದರ ನಂತರವೇ ಕಾರು ಖರೀದಿಸಲು ಬಹುತೇಕ ಜನರು ತೀರ್ವನಿಸಿದ್ದಾರೆ. ಈ ಮೊದಲು ಕಾರುಗಳ ಮೇಲಿನ ಜಿಎಸ್​ಟಿ ಪ್ರಮಾಣ ಶೇ. 28ರಷ್ಟು ಇತ್ತು. ಪರಿಷ್ಕೃತ ಜಿಎಸ್​ಟಿ ದರ ಜಾರಿಗೆ ಬಂದ ನಂತರ ಇದು ಶೇ. 18ಕ್ಕೆ ಇಳಿಕೆಯಾಗಲಿದೆ.

ಇದರಿಂದಾಗಿ 1,200 ಸಿ.ಸಿ.ವರೆಗಿನ ಎಂಜಿನ್ ಸಾಮರ್ಥ್ಯದ ಕಾರುಗಳ ಬೆಲೆ ಲಕ್ಷಾಂತರ ರೂ.ಯಷ್ಟು ಕಡಿಮೆ ಆಗಲಿದೆ. ಆದರೆ ಈ ಎಲ್ಲ ಬೆಳವಣಿಗೆಗಳಿಗೆ ಮೊದಲು ಕಾರು ಸಾಲ ಮಂಜೂರಾಗಿರುವ ಹಲವು ಗ್ರಾಹಕರು ಈಗ ತಮ್ಮ ಬ್ಯಾಂಕ್ ಶಾಖೆಗಳನ್ನು ಸಂರ್ಪಸುತ್ತಿದ್ದಾರೆ. ಜಿಎಸ್​ಟಿ ದರ ಪರಿಷ್ಕರಣೆ ಜಾರಿಗೆ ಬಂದ ನಂತರದಲ್ಲಿ ಕಾರು ಖರೀದಿ ಮಾಡುವುದಾಗಿ ಹೇಳುತ್ತಿದ್ದಾರೆ. ಈಗ ಮಂಜೂರಾಗಿರುವ ಸಾಲವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ. ಇದು ಬ್ಯಾಂಕುಗಳಿಗೆ ತಲೆನೋವಾಗಿ ಪರಿಣಮಿಸಿದೆ. ‘ಜಿಎಸ್​ಟಿ ದರ ಇಳಿಕೆ ನಂತರ ಸಿಗುವ ಪ್ರಯೋಜನ, ಮಂಜೂರಾಗಿರುವ ಸಾಲವನ್ನು ರದ್ದು ಮಾಡಿಸಿಕೊಳ್ಳಲು ನೀಡಬೇಕಿರುವ ಶುಲ್ಕಕ್ಕಿಂತ ಹೆಚ್ಚಾಗಿರುವುದೇ ಗ್ರಾಹಕರು ಈ ಕೋರಿಕೆಯನ್ನು ಬ್ಯಾಂಕುಗಳ ಮುಂದೆ ಇರಿಸುತ್ತಿರುವುದಕ್ಕೆ ಕಾರಣ’ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವು ಬ್ಯಾಂಕುಗಳು ಮುಂಗಾರಿನ ಸಂದರ್ಭದಲ್ಲಿ ವಾಹನ ಸಾಲದ ಮೇಲಿನ ಕೆಲವು ಶುಲ್ಕಗಳನ್ನು ಮನ್ನಾ ಮಾಡಿವೆ. ‘ಕಾರು ಮಾರಾಟ ಮಾಡುವವರು ಈಗಾಗಲೇ ಇನ್ವಾಯ್ಸ್ ನೀಡಿ ಆಗಿದ್ದರೆ, ಹಳೆಯ ಜಿಎಸ್​ಟಿ ದರವೇ ಅನ್ವಯ ಆಗುತ್ತದೆ’ ಎಂದು ಪರೋಕ್ಷ ತೆರಿಗೆಗಳು ಹಾಗೂ ಸುಂಕಗಳ ಕೇಂದ್ರೀಯ ಮಂಡಳಿಯ (ಸಿಬಿಐಸಿ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾರು ಡೀಲರ್​ಗಳು ಇನ್ವಾಯ್ಸ್ ನೀಡಿರದಿದ್ದರೆ ಗ್ರಾಹಕರು ಪರಿಷ್ಕೃತ ಜಿಎಸ್​ಟಿ ದರದ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net