

ಹುಮನಾಬಾದ್: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಹಾಗೂ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವ ಲಕ್ಷಾಂತರ ಭಕ್ತರ ಜೈಘೋಷಗಳ ಮಧ್ಯೆ ಪಟ್ಟಣದಲ್ಲಿ ಶನಿವಾರ ಬೆಳಗ್ಗಿನ ಜಾವ ವೈಭವದಿಂದ ನೆರವೇರಿತು.
ಮಹಾರಾಷ್ಟç, ತೆಲಂಗಾಣ, ಆಂಧ್ರಪ್ರದೇಶ ಸೇರಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಕೃತಾರ್ಥರಾದರು. ಥೇರ್ ಮೈದಾನದ ಅಗ್ನಿ ಕುಂಡದಲ್ಲಿ ಶುಕ್ರವಾರ ಬೆಳಗ್ಗಿನ ಜಾವದಿಂದ ಮಧ್ಯರಾತ್ರಿವರೆಗೆ ಅಗ್ಗಿ ತುಳಿಯಲು ಭಕ್ತರ ಸರದಿ ಏರ್ಪಟ್ಟಿತ್ತು.
ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶುಕ್ರವಾರ ರಾತ್ರಿ ಶುರುವಾದ ಪಲ್ಲಕ್ಕಿ ಮೆರವಣಿಗೆಯುದ್ದಕ್ಕೂ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಾರ್ಗಮಧ್ಯೆ ಭಕ್ತಾಧಿಗಳು ದೇವರಿಗೆ ಶಾಲು ಹೊದಿಸಿ ಹರಕೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಶನಿವಾರ ಬೆಳ್ಳಂಬೆಳಗ್ಗೆ ಥೇರ್ ಮೈದಾನಕ್ಕೆ ಬಂದ ಮೆರವಣಿಗೆ ನೋಡಲು ಮೈದಾನ ಹಾಗೂ ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಭಕ್ತರು ನಿಂತಿದ್ದರು. ಡೊಳ್ಳು ಕುಣಿತ, ಬಾಜಾ-ಭಜಂತ್ರಿ ಮತ್ತಿತರ ವಾದ್ಯ ಮೇಳದ ಕಲಾ ತಂಡಗಳ ಕಲರವ ಹಾಗೂ ಜೈಘೋಷಗಳ ಸದ್ದು, ಬಾನೆತ್ತರಕ್ಕೆ ಹಾರಿದ ಪಟಾಕಿಗಳ ಬಣ್ಣ ಬಣ್ಣದ ಓಕುಳಿ ಮಧ್ಯೆ ರಥೋತ್ಸವ ಸ್ಥಳೀಯ ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜರುಗಿತು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ , ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲï, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ತಹಸೀಲ್ದಾರ್ ಅಂಜುಂ ತಬಸ್ಸುಮ್ ಇತರರಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡರ್, ಸಿಪಿಐಗಳಾದ ಗುರು ಪಾಟೀಲï, ಮಹೇಶಕುಮಾರ ಪಾಟೀಲï, ಮಲ್ಲಿಕಾರ್ಜುನ ಯಾತನೂರ, ಅಲಿಸಾಬ್ ನೇತೃತ್ವದಲ್ಲಿ ಪಿಎಸ್‌ಐಗಳು ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು. ಸ್ವಯಂ ಸೇವಕರು ಬಿಳಿ ವಸ್ತç ಧರಿಸಿ ತಲೆ ಮೇಲೆ ಬಿಳಿ ಟೋಪಿ ಮತ್ತು ಜ್ಯಾಕೆಟ್ ಹಾಕಿ ದೇವರ ಸೇವೆಯಲ್ಲಿ ತೊಡಗಿದ್ದರು.
ಕಲಾ ತಂಡಗಳು ಭಾಗಿ: ರಥೋತ್ಸವದಲ್ಲಿ ನಾನಾ ಕಡೆಯ ಜನಪದ ಹಾಗೂ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಮತ್ತು ಮದ್ದು ಸುಡುವ ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆದವು. ಕುದುರೆ ಕುಣಿತ, ಮಹಿಳೆಯರು ಮತ್ತು ಪುರುಷರ ಡೊಳ್ಳು ಕುಣಿತ, ಕೇರಳದ ವಾದ್ಯ ಸೇರಿ ವಿವಿಧ ಕಲಾ ತಂಡಗಳ ಪ್ರದರ್ಶನ ಜಾತ್ರೋತ್ಸವಕ್ಕೆ ಜಾನಪದ ಉತ್ಸವ ಮೆರುಗು ತಂದುಕೊಟ್ಟಿತ್ತು. ಅಸಂಖ್ಯ ಭಕ್ತರಿಂದ ಶ್ರೀ ವೀರಭದ್ರೇಶ್ವರ ಮಹಾರಾಜಕೀ ಜೈ ಎಂಬ ಜೈಘೋಷಗಳು ಮುಗಿಲು ಮುಟ್ಟಿದವು.
ಭಕ್ತರಿಗೆ ಕೃತಜ್ಞತೆ ಸಲ್ಲಿಸಿದ ಗಣ್ಯರು: ಪಟ್ಟಣದ ಶ್ರೀ ವೀರಭದ್ರೇಶ್ವರ ಜಾತ್ರೋತ್ಸವ ವಿಜೃಂಭಣೆ ಜತೆಗೆ ಶಾಂತ ರೀತಿಯಿಂದ ನಡೆಯಲು ಸಹಕರಿಸಿದ ಸಮಸ್ತ ಭಕ್ತರು, ಸ್ವಯಂ ಸೇವಕರು, ಸೇವೆ ಸಲ್ಲಿಸಿದ ಎಲ್ಲ ಇಲಾಖೆ ಸಿಬ್ಬಂದಿ ಪ್ರತ್ಯೇಕ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲï ಕೃತಜ್ಞತೆ ಸಲ್ಲಿಸಿದ್ದಾರೆ.