ಹಾಲಿವುಡ್​ ಚಿತ್ರದಲ್ಲಿನ ಚಿಕ್ಕ ಪಾತ್ರ ಸಮರ್ಥಿಸಿಕೊಂಡ ಹ್ಯೂಮಾ ...

Huma Qureshi - Final
Published on

ಮುಂಬೈ: 'ಆರ್ಮಿ ಆಫ್​ ದಿ ಡೆಡ್​​' ಎಂಬ ಹಾಲಿವುಡ್​ ಚಿತ್ರದಲ್ಲಿ ಹ್ಯೂಮಾ ಖುರೇಷಿ ನಟಿಸುತ್ತಾರೆ ಎಂದಾಗ ಹಲವರು ಖುಷಿಯಾಗಿದ್ದರು. ಏಕೆಂದರೆ, ಬಾಲಿವುಡ್​​ ನಟಿಯೊಬ್ಬರು, ಹಾಲಿವುಡ್​ ಚಿತ್ರದಲ್ಲಿ ನಟಿಸುವುದು ಕಡಿಮೆ ಮಾತಲ್ಲ. ಕಡಿಮೆ ಸಂಖ್ಯೆಯ ನಟಿಯರು ಇದುವರೆಗೂ ಹಾಲಿವುಡ್​ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಆ ಪಟ್ಟಿಗೆ ಹ್ಯೂಮಾ ಸಹ ಸೇರಿಕೊಂಡಿದ್ದು ಖುಷಿಯ ವಿಚಾರವೇ.

ಆದರೆ, ಚಿತ್ರ ನೋಡಿದವರಿಗೆ ನಿರಾಸೆಯಾಗಿದ್ದು ಸುಳ್ಳಲ್ಲ. ಹ್ಯೂಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು ಎಂದುಕೊಂಡವರಿಗೆ, 'ಆರ್ಮಿ ಆಫ್​ ದಿ ಡೆಡ್​' ನೋಡಿ ನಿಜಕ್ಕೂ ನಿರಾಸೆಯಾಗಿತ್ತು. ಏಕೆಂದರೆ, ಚಿತ್ರದಲ್ಲಿ ಆಕೆಯದ್ದು ಕೆಲವೇ ನಿಮಿಷಗಳ ಪಾತ್ರ. ಇದೇ ವಿಷಯವಾಗಿ ಹ್ಯೂಮಾ ಸಾಕಷ್ಟು ಟ್ರೋಲ್​ ಆಗಿದ್ದರು. ಎಷ್ಟೇ ಟ್ರೋಲ್​ ಆದರೂ, ಹ್ಯೂಮಾ ಈ ಬಗ್ಗೆ ಬಾಯಿಬಿಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನನ್ನ ಮೊದಲ ಚಿತ್ರ 'ಗ್ಯಾಂಗ್ಸ್​ ಆಫ್​ ವಸ್ಸೇಪುರ್​'ನಲ್ಲಿ ನನ್ನದು ಚಿಕ್ಕ ಪಾತ್ರವಾಗಿತ್ತು. ಹೆಚ್ಚೆಂದರೆ, 15 ನಿಮಿಷಗಳ ಕಾಲ ನಾನು ತೆರೆಯ ಮೇಲೆ ಕಾಣಿಸಿಕೊಂಡಿದ್ದೆ. ಆದರೆ, ಅದಕ್ಕೆ ನನಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು ಮತ್ತು ಜನ ಈಗಲೂ ಆ ಪಾತ್ರದ ಬಗ್ಗೆ ಮಾತನಾಡುತ್ತಾರೆ. ಹಾಲಿವುಡ್​ ಚಿತ್ರದಲ್ಲಿ ನನ್ನ ಪಾತ್ರ ಚಿಕ್ಕದಿರಬಹುದು. ಆದರೆ, ಅದೊಂದು ಪ್ರಮುಖ ಪಾತ್ರ ಮತ್ತು ಇಡೀ ಚಿತ್ರಕ್ಕೆ ವಿಚಿತ್ರ ತಿರುವು ನೀಡುವ ಪಾತ್ರ' ಎಂದು ಅವರು ವ್ಯಾಖ್ಯಾನಿಸುತ್ತಾರೆ.

ಇನ್ನು, ತಮಗೆ ಗಾತ್ರ ಮುಖ್ಯವಲ್ಲ, ಪಾತ್ರ ಮುಖ್ಯ ಎಂದು ಹಲವು ನಟ-ನಟಿಯರು ಹೇಳಿಕೊಂಡಿದ್ದಾರೆ. ಅದೇ ಮಾತನ್ನು ಹ್ಯೂಮಾ ಸಹ ಹೇಳಿಕೊಂಡಿದ್ದಾರೆ. 'ನಾನು ತೆರೆಯ ಮೇಲೆ ಎಷ್ಟು ಹೊತ್ತು ಇರುತ್ತೀನಿ ಎನ್ನುವುದು ಮುಖ್ಯವಲ್ಲ, ಏನು ಮಾಡುತ್ತೀನಿ ಎನ್ನುವುದು ಬಹಳ ಮುಖ್ಯ' ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net