

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಹೇಳಿಕೊಳ್ಳಲು ಇದು ರಾಜ್ಯ ಹೆದ್ದಾರಿ. ಆದರೆ ಈ ಹೆದ್ದಾರಿಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದೆ. ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ದುಸ್ತರವಾಗಿದೆ.
ಹಲವು ವರ್ಷಗಳ ಹಿಂದೆ ಕಾರ್ಕಳದಿಂದ ಪಡುಬಿದ್ರಿ ವರೆಗಿನ ರಾಜ್ಯ ಹೆದ್ದಾರಿ 1ರ ಅಗಲೀಕರಣ ಹಾಗೂ ಹೆದ್ದಾರಿ ನಿರ್ವಾಣ ಕಾಮಗಾರಿ ನಡೆದಿತ್ತು. ಪ್ರಸ್ತುತ ಕಾರ್ಕಳದಿಂದ ಪಡುಬಿದ್ರಿವರೆಗಿನ ಸುವಾರು 29 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಯೂ ಇದೀಗ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಈ ಹೊಂಡಗಳನ್ನು ತಪ್ಪಿಸಿ ಸರ್ಕಸ್ ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆಗಾಲದಲ್ಲಿ ಸಂಚಾರವೇ ದುಸ್ತರ: ಬೆಳ್ಮಣ್, ಕಾಂಜರಕಟ್ಟೆ, ನಂದಿಕೂರು ಭಾಗದಲ್ಲಿಯೂ ಬೃಹತ್ ಗಾತ್ರದ ಹೊಂಡಗಳು ನಿರ್ವಾಣವಾಗಿದ್ದು ಹೊಂಡವನ್ನು ತಪ್ಪಿಸುವ ಭರದಲ್ಲಿ ವಾಹನಗಳ ನಡುವೆ ಅಪಘಾತಗಳು ನಡೆದ ನಿದರ್ಶನವು ಸಾಕಷ್ಟಿದೆ. ಕಾಂಜರಕಟ್ಟೆ, ನಂದಿಕೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಮಳೆಗಾಲ ಆರಂಭವಾದಾಗಿನಿಂದ ಈ ರಸ್ತೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಗುಂಡಿಯಲ್ಲಿ ನೀರು ನಿಲ್ಲುವುದರಿಂದ ಅದರ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳಾಗುತ್ತಿವೆ.
ನೆರೆ ಜಿಲ್ಲೆ ಹಾಗೂ ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ನಾನಾ ಭಾಗದಿಂದ ರೋಗಿಗಳನ್ನು ಹೊತ್ತು ತರುವ ಆಂಬುಲೆನ್ಸ್‌ಗಳು ಇದೇ ಹೆದ್ದಾರಿಯ ಮೂಲಕ ಮಂಗಳೂರಿನ ಆಸ್ಪತ್ರೆಗಳಿಗೆ ಸಾಗುತ್ತವೆ. ಬೃಹತ್ ಗಾತ್ರದ ಹೊಂಡಗಳಿರುವ ಈ ರಸ್ತೆಯಲ್ಲಿ ತುರ್ತು ಸಂದರ್ಭದಲ್ಲಿ ಭಾರಿ ಸಮಸ್ಯೆಯಾಗುತ್ತಿದೆ.
ಈ ರಾಜ್ಯ ಹೆದ್ದಾರಿ ಕರಾವಳಿ ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಸಾವಿರಾರು ವಾಹನಗಳು ಪ್ರತಿದಿನ ಈ ವಾರ್ಗವಾಗಿ ಸಂಚರಿಸುತ್ತವೆ. ಆದರೂ ರಸ್ತೆ ದುರಸ್ತಿ ಕಾರ್ಯಕ್ಕೆ ಸಂಬಂಧಿಸಿದಂತೆ ಆಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೊಂಡ ಗುಂಡಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಸಂಬಂಧಪಟ್ಟ ಇಲಾಖೆ ತಕ್ಷಣವೇ ದುರಸ್ತಿ ಕಾರ್ಯ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಂದಿಕೂರಿನಲ್ಲಿ ಹಾದುಹೋದ ರೈಲ್ವೆ ವಾರ್ಗದ ಮೇಲ್ಭಾಗದ ಸೇತುವೆಯೂ ಸಂಪೂರ್ಣ ಹದಗೆಟ್ಟಿದ್ದು ಅತ್ತಿತ್ತ ಸಾಗುವುದೇ ದೊಡ್ದ ಸಾಹಸವಾಗಿದೆ. ಸೇತುವೆಯ ಉದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ವಾಣಗೊಂಡು ಜಲ್ಲಿ, ಡಾಂಬರು ಎಲ್ಲವೂ ಕಿತ್ತು ಹೋಗಿ ಸಮಸ್ಯೆಯಾಗಿದೆ. ಅಲ್ಲದೆ ಸಾಕಷ್ಟು ವಾಹನ ಸವಾರರು ಹೊಂಡದ ಅರಿವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ.
ಪ್ರತಿದಿನ ನಾವು ಈ ರಸ್ತೆಯಲ್ಲಿ ಪ್ರಯಾಣಿಸುತ್ತೇವೆ. ಆದರೆ ಗುಂಡಿಗಳು ಎಷ್ಟು ದೊಡ್ಡದಾಗಿವೆ ಎಂದರೆ ವಾಹನಗಳನ್ನು ನಿಯಂತ್ರಿಸುವುದು ಕಷ್ಟ. ಅಧಿಕಾರಿಗಳು ಕೂಡಲೇ ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು. -ಪುನೀತ್, ಕುವಾರ್, ವಾಹನ ಸವಾರ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ದಿನನಿತ್ಯ ಸಾವಿರಾರು ಜನರು ಸಂಚರಿಸುವ ಈ ರಸ್ತೆಯ ದುರಾವಸ್ಥೆಯಿಂದ ನಿತ್ಯ ತೊಂದರೆಯಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ಮೌನವಹಿಸಿದೆ. ಈ ರಸ್ತೆ ದುರಸ್ತಿ ಬಗ್ಗೆ ಅಧಿಕಾರಿಗಳು ಮುಂದಾಗಬೇಕಿದೆ. -ಶ್ರೀನಿವಾಸ್, ಗ್ರಾಮಸ್ಥರು. https://www.vijayavani.net/students-role-is-important-in-developing-kundapra-kannada-2 https://www.vijayavani.net/students-role-is-important-in-developing-kundapra-kannada