ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್, ಇಂಡಿ ಶಾಖಾ ಕಾಲುವೆ ನವೀಕರಣಕ್ಕೆ ರೂ.2666.70 ಕೋಟಿ ಅನುದಾನ, ಸಂಸದರ ಸದ್ದಿಲ್ಲದ ಸಾಧನೆ-ರೈತರ ಶ್ಲಾಘನೆ

IBC CANAL
ಇಂಡಿ ತಾಲೂಕಿನ ಹಿರೇಮಸಳಿ ಬಳಿ ಇರುವ ಕಾಲುವೆ ಸ್ಥಿತಿಗತಿ.
Published on

ಪರಶುರಾಮ ಭಾಸಗಿ ವಿಜಯಪುರ

ವಿಧಾನ ಸಭೆ ಚುನಾವಣೆ ಪೂರ್ವ ಕಾಂಗ್ರೆಸ್ ಕೈಗೊಂಡ ‘ಕೃಷ್ಣಾ ಜಲಾಂದೋಲನ’ದ ಸಂಕಲ್ಪ ಈಡೇರಿಕೆಯ ನಿರೀಕ್ಷೆ ಇನ್ನೂ ನಿರೀಕ್ಷೆಯಾಗಿ ಉಳಿದಿರುವಾಗಲೇ ಹದಗೆಟ್ಟ ಕಾಲುವೆಗಳ ನವೀಕರಣಕ್ಕಾಗಿ ಕೇಂದ್ರ ಸರ್ಕಾರ 2666.70 ಕೋಟಿ ರೂಪಾಯಿ ನೀಡಲು ಅಸ್ತು ಎಂದಿದೆ.

2022 ಡಿ.30ರಂದು ವಿಜಯಪುರ ನಗರದ ದರಬಾರ್ ಮೈದಾನದಲ್ಲಿ ನಡೆದ ಕೃಷ್ಣಾ ಜಲಾಂದೋಲನ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಆದಿಯಾಗಿ ಜಿಲ್ಲೆ ಹಾಗೂ ರಾಜ್ಯದ ಘಟಾನುಘಟಿ ನಾಯಕರುಗಳು ‘2023ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ರಾಜ್ಯದ ನೀರಾವರಿಗಾಗಿ ವರ್ಷಕ್ಕೆ 40 ಸಾವಿರ ಕೋಟಿಯಂತೆ ಒಟ್ಟು 2 ಲಕ್ಷ ರೂಪಾಯಿ ಖರ್ಚು ಮಾಡುವುದಾಗಿಯೂ ಅದರಲ್ಲಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗಾಗಿ 75 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡುವುದಾಗಿ’ಯೂ ಸಂಕಲ್ಪ ಮಾಡಿದ್ದರು.

ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷದ ಸಾಧನಾ ಸಮಾವೇಶ ಮಾಡಿಕೊಂಡಿರೂ ಈವರೆಗೂ ನಿರೀಕ್ಷಿತ ಅನುದಾನ ಮೀಸಲಿಡಲೇ ಇಲ್ಲ. ಹೀಗಾಗಿ ಹದಗೆಟ್ಟ ಕಾಲುವೆ ಕಾಮಗಾರಿಗಳನ್ನು ಸಹ ರಿಪೇರಿ ಮಾಡಲಾಗದ ಸ್ಥಿತಿ ನಿರ್ಮಾಣವಾಗಿರುವುದನ್ನು ಮನಗಂಡ ಸಂಸದ ರಮೇಶ ಜಿಗಜಿಣಗಿ ಕೇಂದ್ರ ಸರ್ಕಾರದ ಮೊರೆ ಹೋದ ಪರಿಣಾಮ ತತ್‌ಕ್ಷಣಕ್ಕೆ ಸ್ಪಂದಿಸಿದ ಸರ್ಕಾರ ಇಂಡಿ ಶಾಖಾ ಕಾಲುವೆ ಜಾಲದ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣಕ್ಕೆ 2666.70 ಕೋಟಿ ರೂ. ನೀಡಲು ಒಪ್ಪಿದ್ದು, ಡಿಪಿಆರ್ ಸಿದ್ಧಪಡಿಸಿ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

ಕ್ಷೇತ್ರದ ಸ್ಥಿತಿ ಮನವರಿಕೆ

ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲೊಂದಾದ ವಿಜಯಪುರ 1053471 ಹೆಕ್ಟೇರ್ ಭೌಗೋಳಿಕ ಕ್ಷೇತ್ರ ಹೊಂದಿದ್ದು, ಇದರಲ್ಲಿ 916195 ಹೆಕ್ಟೇರ್ ಸಾಗುವಳಿ ಕ್ಷೇತ್ರ ಹೊಂದಿದೆ. 356890 ಹೆಕ್ಟೇರ್ ನೀರಾವರಿ ಕ್ಷೇತ್ರ ಹೊಂದಿದ್ದು, 428107 ಹಿಡುವಳಿದಾರರಿದ್ದಾರೆ. ಈ ಪ್ರದೇಶವು ಬಿಸಿ ಮತ್ತು ಶುಷ್ಕ ಹವಾಮಾನಕ್ಕೆ ಒಳಪಟ್ಟಿದೆ. ವಾರ್ಷಿಕ ಸರಾಸರಿ ಮಳೆ 550 ಮಿಮೀ ಗಿಂತ ಕಡಿಮೆ ಮತ್ತು ಕೇವಲ 38 ಮಳೆಯ ದಿನಗಳು ಮಾತ್ರ ಇರುತ್ತವೆ. ಬೇಸಿಗೆಯಲ್ಲಿ ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿರುತ್ತದೆ. ಆದಾಗ್ಯೂ, ಇಂಡಿ, ಸಿಂದಗಿ ಮತ್ತು ಚಡಚಣ ತಾಲ್ಲೂಕುಗಳಲ್ಲಿ (ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಬರುವ) ಮಳೆ ಇನ್ನೂ ಕಡಿಮೆ ಇರುತ್ತದೆ ಮತ್ತು ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗೆ ಹತ್ತಿರ ಏರುತ್ತದೆ. ಈ ಸ್ಥಳಗಳಲ್ಲಿ ಅಂತರ್ಜಲವು ತುಂಬಾ ಕಡಿಮೆಯಾಗಿದೆ ಮತ್ತು ಇಳುವರಿ ತುಂಬಾ ಕಡಿಮೆಯಾಗಿದೆ. ಈ ಕ್ಷೇತ್ರದ ಜನರು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹೆಣಗಾಡುತ್ತಾರೆ ಮತ್ತು ನೀರಿನ ಕೊರತೆಯಿಂದಾಗಿ ಕಡಿಮೆ ಉತ್ಪಾದಕತೆಯೊಂದಿಗೆ ಖಾರಿಫ್ ಬೆಳೆಗಳನ್ನು ವಿರಳವಾಗಿ ಬೆಳೆಯುತ್ತಾರೆ. ನೀರಿನ ಮೂಲ ಮಳೆ ಮತ್ತು ಸ್ವಲ್ಪ ಮಟ್ಟಿಗೆ ಇಂಡಿ ಶಾಖೆ ಕಾಲುವೆ (ಐಬಿಸಿ)ಯಾಗಿದೆ. ಹೀಗಾಗಿ ಕಾಲುವೆ ದುರಸ್ಥಿಯ ಅನಿವಾರ್ಯತೆ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಅವರು ನಿರಂತರವಾಗಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿದ್ದರು.

ರೈತರ ಏಕೈಕ ಆಶಾಕಿರಣ ಐಬಿಸಿ

ವಿಜಯಪುರ ಕ್ಷೇತ್ರದ ಸುಮಾರು 65000 ಹೆಕ್ಟೇರ್ ಬರ ಪೀಡಿತ ಪ್ರದೇಶಗಳಿಗೆ ಐಬಿಸಿ (ಇಂಡಿ ಶಾಖೆ ಕಾಲುವೆ) ಜೀವನಾಡಿಯಾಗಿದೆ. ಈ ಕಾಲುವೆ ಜಾಲದಿಂದಾಗಿ ರೈತರು ಬೆಳೆಗಳನ್ನು ಬೆಳೆಯುತ್ತಾರೆ, ಟ್ಯಾಂಕ್‌ಗಳನ್ನು ತುಂಬುತ್ತಾರೆ, ಗ್ರಾಮೀಣ ವಾಸ ಮತ್ತು ಜಾನುವಾರು ಮೇವಿಗಾಗಿ ದೂರದ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಬಹು-ಗ್ರಾಮ ಯೋಜನೆಗಳನ್ನು (ಎಂವಿಎಸ್) ನಡೆಸಲಾಗುತ್ತದೆ ಮತ್ತು ಇದು ಅಂತರ್ಜಲವನ್ನು ಸ್ವಲ್ಪ ಮಟ್ಟಿಗೆ ಮರುಪೂರಣಗೊಳಿಸಲು ಕೊಡುಗೆ ನೀಡುತ್ತದೆ. ಐಬಿಸಿ ಹೊರತುಪಡಿಸಿ ಈ ಪ್ರದೇಶಕ್ಕೆ ಬೇರೆ ಯಾವುದೇ ನೀರಿನ ಮೂಲವಿಲ್ಲ. ಹೀಗಾಗಿ, ಕೃಷಿ ಅಭಿವೃದ್ಧಿ ಮತ್ತು ರೈತರ ಆರ್ಥಿಕತೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆನ್ನೆಲುಬಾಗಿರುವುದು ಐಬಿಸಿ. ಹೀಗಾಗಿ ಈ ಐಬಿಸಿಯ ಆಧುನೀಕರಣದ ಅನುಷ್ಟಾನ ಪ್ರಕ್ರಿಯೆ ವೇಗಗೊಳಿಸಲು ಸಂಸದ ಜಿಗಜಿಣಗಿ ಪ್ರಧಾನ ಮಂತ್ರಿಗೂ ಮನವಿ ಪತ್ರ ಸಲ್ಲಿಸಿದ್ದಲ್ಲದೇ ಖುದ್ದಾಗಿ ಭೇಟಿ ನೀಡಿ ಒತ್ತಾಯಿಸಿದ್ದರು.

ಕೇಂದ್ರ ಜಲಶಕ್ತಿ ಸಚಿವಾಲಯದ ಪರಿಶೀನಾ ಸಮಿತಿ ಸಂಸದರ ಬೇಡಿಕೆಯನ್ನು ಮನ್ನಿಸಿ 2666.70 ಕೋಟಿ ರೂ. ಅನುದಾನ ನೀಡಲು ಒಪ್ಪಿದ್ದು, ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವುದು ಇಂಡಿ ಹಾಗೂ ಸಿಂದಗಿ ಭಾಗದ ರೈತರ ಸಂಭ್ರಮ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಹಾಗೂ ಸಂಸದರ ಸಾಧನೆಗೆ ವ್ಯಾಪಕ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net