ಫಾಸ್ಟ್ಯಾಗ್ ವಾರ್ಷಿಕ ಪಾಸ್​ಗೆ ಭಾರಿ ಬೇಡಿಕೆ; ಮೊದಲ ದಿನವೇ 1.24 ಲಕ್ಷ ಜನರಿಂದ ಖರೀದಿ; ವರ್ಷಕ್ಕೆ 3 ಸಾವಿರ ರೂ. ಶುಲ್ಕ

fastAG
Published on

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​ಎಚ್​ಎಐ) ಶುಕ್ರವಾರದಿಂದ 3,000 ರೂ.ಗಳ ವಾರ್ಷಿಕ ಫಾಸ್ಟ್ಯಾಗ್ ಪಾಸ್ ಜಾರಿಗೊಳಿಸಿದೆ. ಶುಕ್ರವಾರ ಅಪರಾಹ್ನ 4.30ರವರೆಗೆ 1.2 ಲಕ್ಷ ಜನರು ಈ ಪಾಸ್ ಖರೀದಿಸಿದ್ದು, ಸುಮಾರು ಅಷ್ಟೇ ಸಂಖ್ಯೆಯ ವಹಿವಾಟುಗಳು ಟೋಲ್ ಪ್ಲಾಜಾಗಳಲ್ಲಿ ದಾಖಲಾಗಿವೆ ಎಂದು ಎನ್​ಎಚ್​ಎಐ ತಿಳಿಸಿದೆ.

ಸಕ್ರಿಯಗೊಳಿಸುವ ವಿಧಾನ: ರಾಜಮಾರ್ಗ ಯಾತ್ರಾ ಆಪ್ ಅಥವಾ ಎನ್​ಎಚ್​ಎಐ/ ಎಂಒಆರ್​ಟಿಎಚ್ ಅಧಿಕೃತ ವೆಬ್​ಸೈಟ್​ನಲ್ಲಿ ಈ ಪಾಸನ್ನು ಖರೀದಿಸಬಹುದು. ವಾಹನ ಸಂಖ್ಯೆ ಮತ್ತು ಪ್ರಸ್ತುತ ಫಾಸ್ಟ್ಯಾಗ್ ಐಡಿ ನಮೂದಿಸಿ ಲಾಗಿನ್ ಮಾಡಬೇಕು. ವಾಹನ ನೋಂದಣಿ ಸಂಖ್ಯೆ (ವೆಹಿಕಲ್ ರಿಜಿಸ್ಟ್ರೇಷನ್ ನಂಬರ್- ವಿಆರ್​ಎನ್), ಸಕ್ರಿಯ ಫಾಸ್ಟ್ಯಾಗ್ ಮತ್ತು ಕೆವೈಸಿ ಪೂರ್ಣಗೊಂಡಿರಬೇಕು. ಯುಪಿಐ, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ 3,000 ರೂ. ಪಾವತಿಸಬೇಕು. ನಂತರ, ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್​ಗೆ ಪಾಸ್ ಲಿಂಕ್ ಆಗುತ್ತದೆ. ಎಸ್ಸೆಮ್ಮೆಸ್ ಮೂಲಕ ದೃಢೀಕರಣ ಬರುತ್ತದೆ.

ಯಾವ ವಾಹನಗಳು ಅರ್ಹ?: ಈ ಪಾಸ್ ಕೇವಲ ಖಾಸಗಿ, ವಾಣಿಜ್ಯೇತರ ವಾಹನಗಳಿಗೆ ಲಭ್ಯವಿದೆ. ಚಾಸಿಸ್ ಸಂಖ್ಯೆಗೆ ಲಿಂಕ್ ಆಗಿರುವ ಫಾಸ್ಟ್ಯಾಗ್​ಗಳು ಅರ್ಹವಲ್ಲ. ವಿಆರ್​ಎನ್ ನವೀಕರಣ ಅಗತ್ಯ. ಫಾಸ್ಟ್ಯಾಗ್ ಕಪ್ಪುಪಟ್ಟಿಯಲ್ಲಿ ಇರಬಾರದು.

ಎಷ್ಟು ಟ್ರಿಪ್​ಗಳು?: ಖರೀದಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಅಥವಾ 200 ಟೋಲ್ ಕ್ರಾಸಿಂಗ್​ಗಳಿಗೆ ಈ ಪಾಸ್ ವ್ಯಾಲಿಡ್ ಆಗಿರುತ್ತದೆ. (ಯಾವುದು ಮೊದಲು ಬರುತ್ತದೆಯೋ ಅದು). ಒಂದು ಟೋಲ್ ದಾಟಿದರೆ ಒಂದು ಟ್ರಿಪ್ ಎಂದು ಲೆಕ್ಕ. 200 ಟ್ರಿಪ್​ಗಳು ಮುಗಿದರೆ, ವರ್ಷ ಮುಗಿಯದಿದ್ದರೂ ಮತ್ತೆ 3,000 ರೂ. ಪಾವತಿಸಿ ರೀಚಾರ್ಜ್ ಮಾಡಿಕೊಳ್ಳಬೇಕು.

ಪ್ರಯೋಜನಗಳು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಸಂಚರಿಸುವವರಿಗೆ ಈ ಪಾಸ್​ನಿಂದ ಪ್ರತಿ ವರ್ಷ 5 ಸಾವಿರದಿಂದ 7 ಸಾವಿರ ರೂ.ವರೆಗೆ ಉಳಿತಾಯವಾಗುತ್ತದೆ. ಟೋಲ್​ನಲ್ಲಿ ಕಾಯುವ ಸಮಯ ಉಳಿತಾಯವಾಗುತ್ತದೆ. ಪದೇಪದೆ ರೀಚಾರ್ಜ್ ಮಾಡಿಸುವ ತೊಂದರೆ ತಪ್ಪುತ್ತದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್​ಪ್ರೆಸ್​ವೇಗಳಲ್ಲಿ ಮಾತ್ರ ಈ ಪಾಸ್ ವ್ಯಾಲಿಡ್ ಆಗಿದ್ದು, ರಾಜ್ಯ ಅಥವಾ ಖಾಸಗಿ ಹೆದ್ದಾರಿಗಳಿಗೆ ಅನ್ವಯಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net