More

  ಶ್ರೀ ಸಿದ್ಧಾರೂಢ ಮಠದಲ್ಲಿ ಲಕ್ಷ ದೀಪೋತ್ಸವ 12ರಂದು

  ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಡಿ. 12ರಂದು ಸಂಜೆ 6.30ಕ್ಕೆ ಶ್ರೀಮಠದ ಟ್ರಸ್ಟ್ ಕಮಿಟಿ ವತಿಯಿಂದ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸಿದ್ಧಾರೂಢಸ್ವಾಮಿ ಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ ಹೇಳಿದರು.

  ಶ್ರೀಮಠದ ಸಭಾಗೃಹದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶ್ರೀಮಠದ ಆಡಳಿತಾಧಿಕಾರಿ, ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಅವರು ದೀಪೋತ್ಸವಕ್ಕೆ ಚಾಲನೆ ನೀಡುವರು. ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ ಅಧ್ಯಕ್ಷತೆ ವಹಿಸುವರು ಎಂದರು.

  ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಸೇರಿ ನಾಲ್ಕೈದು ಗ್ರಾಮಗಳಲ್ಲಿ ಮಣ್ಣಿನಿಂದ ತಯಾರಿಸಿದ 70 ಸಾವಿರ ಹಣತೆಗಳನ್ನು ಶ್ರೀಮಠದಿಂದ ಖರೀದಿಸಲಾಗಿದೆ. ಜತೆಗೆ ಮಠದಲ್ಲಿ 30 ಸಾವಿರ ಹಣತೆಗಳಿವೆ. ಭಕ್ತರು ಕೂಡ ಹಣತೆಗಳನ್ನು ತಂದು ಲಕ್ಷ ದೀಪೋತ್ಸವದಲ್ಲಿ ಭಾಗವಹಿಸಬಹುದು ಎಂದರು.

  ಲಕ್ಷ ದೀಪೋತ್ಸವದಲ್ಲಿ ವಿವಿಧ ಭಾಗದ ಅಂದಾಜು 50 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಂದು ಸಿದ್ಧಾರೂಢಸ್ವಾಮಿ ಮಠದ ಸಂಸ್ಕೃತ ಪಾಠಶಾಲೆ, ಜೈಂಟ್ಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಶ್ರೀ ಸಿದ್ಧಾರೂಢ ಹೈಸ್ಕೂಲ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಬಸವರಾಜ ಕಲ್ಯಾಣಶೆಟ್ಟರ ಹೇಳಿದರು.

  ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ತತ್ವಾಮೃತ ಉಪಸಮಿತಿ ಕಾರ್ಯಾಧ್ಯಕ್ಷ ಶಾಮಾನಂದ ಪೂಜೇರಿ, ಧರ್ಮದರ್ಶಿ ಮಂಜುನಾಥ ಮುನವಳ್ಳಿ, ವೀರಪ್ಪ ಮಲ್ಲಾಪುರ, ಬಾಳಕೃಷ್ಣ ಮಗಜಿಕೊಂಡಿ, ವಿನಾಯಕ ಘೋಡಕೆ, ಗೀತಾ ಕಲಬುರ್ಗಿ ಇತರರಿದ್ದರು.

  2025ರಲ್ಲಿ ಶತಮಾನೋತ್ಸವ ಕಾರ್ಯಕ್ರಮ

  ಶ್ರೀ ಸಿದ್ಧಾರೂಢಸ್ವಾಮಿ ಚರಿತ್ರೆ ರಚನೆಯಾಗಿ 2025ಕ್ಕೆ 100 ವರ್ಷಗಳಾಗಲಿವೆ. ಈ ಹಿನ್ನೆಲೆಯಲ್ಲಿ 2025ರಲ್ಲಿ ವಿಶ್ವ ವೇದಾಂತ ಪರಿಷತ್ ಕಾರ್ಯಕ್ರಮ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಶಾಮಾನಂದ ಪೂಜೇರಿ ಹೇಳಿದರು.

  ಗೋಶಾಲೆ ನಿರ್ಮಾಣ

  ಶ್ರೀಮಠದ ವತಿಯಿಂದ ಅಂಚಟಗೇರಿ ಬಳಿ ಮಠದ 18 ಎಕರೆ ಜಮೀನಿನಲ್ಲಿ ಬೃಹತ್ ಮತ್ತು ಸುಸಜ್ಜಿತ ಗೋಶಾಲೆ ನಿರ್ಮಿಸಲಾಗುವುದು. ಅಲ್ಲಿ ವಿವಿಧ ತಳಿಯ ಅಂದಾಜು 500 ಗೋವುಗಳನ್ನು ಸಾಕುವ ಯೋಜನೆ ಹೊಂದಲಾಗಿದೆ. ಇಲ್ಲಿ ರೈತರು ಕೂಡ ತಮ್ಮ ಗೋವುಗಳನ್ನು ತಂದು ಬಿಡಲು ಅವಕಾಶವಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts