ಕುತ್ತಾರ್ ರಾಣಿಪುರದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಯುವತಿ ಪತ್ತೆ: ಗ್ಯಾಂಗ್ ರೇಪ್ ಶಂಕೆ

Published on

ಉಳ್ಳಾಲ: ಕುತ್ತಾರ್ ಸಮೀಪದ ರಾಣಿಪುರದಲ್ಲಿ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪಶ್ಚಿಮ ಬಂಗಾಲ ಮೂಲದ ಯುವತಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಬುಧವಾರ ಮಧ್ಯರಾತ್ರಿ ಸುಮಾರು 1.30ರ ಹೊತ್ತಿಗೆ ತೀವ್ರ ಅಸ್ವಸ್ಥಗೊಂಡಿದ್ದ ಸುಮಾರು 20ರ ವರ್ಷದ ಯುವತಿಯೊಬ್ಬಳು ಸ್ಥಳೀಯ ಪರಿಸರದಲ್ಲಿರುವ ಮನೆಯ ಬಾಗಿಲನ್ನು ತಟ್ಟಿದ್ದಾಳೆ. ಮನೆಯವರು ಬಾಗಿಲು ತೆರೆದಾಗ ಕುಡಿಯಲು ನೀರು ಕೇಳಿದ್ದಳು. ಈ ಸಂದರ್ಭ ಯುವತಿಯ ಮೈಮೇಲೆ ತರಚಿದ ಗಾಯಗಳಿರುವುದನ್ನು ಗಮನಿಸಿದ ಸ್ಥಳೀಯರು, ಆಕೆಯನ್ನು ಉಪಚರಿಸಿದ ಬಳಿಕ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಚಿಕಿತ್ಸೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿ ಪಶ್ಚಿಮ ಬಂಗಾಲದವಳಾಗಿದ್ದು, ಕಾರ್ಮಿಕ ಕುಟುಂಬಕ್ಕೆ ಸೇರಿದ್ದಾಳೆ. ಯುವಕರ ಗುಂಪು ಆಕೆಯನ್ನು ರಾಣಿಪುರದ ನೇತ್ರಾವತಿ ನದಿ ತಟದ ಬಳಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿನ ನದಿತಟ ನಿರ್ಜನ ಪ್ರದೇಶವಾಗಿದ್ದು, ಹೊರ ರಾಜ್ಯದ ಕೂಲಿ ಕಾರ್ಮಿಕರು ಗುಂಡು-ತುಂಡಿನ ಪಾರ್ಟಿಯ ಮೂಲಕ ಮೋಜು ಮಸ್ತಿ ಮಾಡುತ್ತಿರುತ್ತಾರೆ ಎನ್ನಲಾಗಿದ್ದು, ಅವರ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ. ಈ ಘಟನೆ ಸ್ಥಳೀಯ ನಿವಾಸಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ. ಯುವತಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮತ್ತು ಪೊಲೀಸರ ತಂಡ ಭೇಟಿ ನೀಡಿದೆ.

ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಘಟನಾ ಸ್ಥಳದಲ್ಲಿರುವ ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net