

ಈಗ ನಾವು ಮೊದಲು ಅರಿಯಬೇಕಾಗಿರುವುದೇ ನಮ್ಮ ಕುಟುಂಬದ ಮಾನಸಿಕ ಒತ್ತಡದ ಸಮಸ್ಯೆಯ ಬಗ್ಗೆ! ಈ ಮಾನಸಿಕ ಒತ್ತಡ ಎನ್ನುವುದು ನೆಮ್ಮದಿಯನ್ನು ಹಾಳುಮಾಡುತ್ತದೆ. ಇದೇನಿದು? ನಮ್ಮ ಕುಟುಂಬದಲ್ಲಿ ಎಲ್ಲರೂ ಮಾನಸಿಕವಾಗಿ ಆರೋಗ್ಯವಾಗಿಯೇ ಇದ್ದೇವಲ್ಲ? ಸಮಸ್ಯೆ ಎಲ್ಲಿದೆ? ಎನ್ನುವ ಪ್ರಶ್ನೆ ಹುಟ್ಟುತ್ತದೆಯಲ್ಲವೇ? “ ನಮ್ಮ ಮನೆಯಲ್ಲಿ ಯಾರಿಗೂ ಮಾನಸಿಕ ಸಮಸ್ಯೆಯೇ ಇಲ್ಲ “ ಎಂದು ನಿಮ್ಮ ಕುಟುಂಬದಲ್ಲಿ ಎಲ್ಲರೂ ಭಾವಿಸುವುದೇ ಆದರೆ ಅದಕ್ಕಿಂತಾ ಸಂತೋಷದ ಸಮಾಚಾರ ಮತ್ತೊಂದಿಲ್ಲ. ಆದರೆ ನನಗೆ ಬರುತ್ತಿರುವ ಪತ್ರಗಳು ಮತ್ತು ಫೋನ್ಕಾಲ್ಗಳು ಈ ಸಂತೋಷದ ಸಮಾಚಾರವನ್ನು ಹೇಳುತ್ತಿಲ್ಲ.
“ ಇದುವರೆವಿಗೂ ಸರಿಯಾಗಿದ್ದರು ಈಗ ಕರೊನಾತಂಕ ಶುರುವಾದಾಗಿನಿಂದ ಚಿಂತೆ ಹೊತ್ತು ಓಡಾಡುತ್ತಿದ್ದಾರೆ, ಸಿಡುಕು ಜಾಸ್ತಿಯಾಗಿದೆ, ಬೆಳಗಿನಿಂದ ರಾತ್ರಿಯ ವರೆಗೆ ಬರೀ ಜಗಳವೇ ಆಗಿದೆ. ಗಂಡ ಹೆಂಡತಿಯ ನಡುವೆ ಹೊಡೆತಬಡಿತಗಳು ಶುರುವಾಗಿದೆ “ ಇಂಥಾ ಸುದ್ದಿಗಳೇ ಬರುತ್ತಿವೆ. ಅಂದರೆ ಇದರ ಅರ್ಥವೇನೆಂದರೆ ಕರೊನಾ ಒತ್ತಡ ಕುಟುಂಬದ ಬಾಂಧವ್ಯವನ್ನು ಒಡೆಯುತ್ತಿದೆ. ಗಂಡಹೆಂಡತಿಯರಿಗೆ ಪರಸ್ಪರರಲ್ಲಿ ತಪ್ಪುಗಳೇ ಪ್ರಖರವಾಗಿ ಕಾಣುತ್ತಿವೆ. ತಂದೆತಾಯಿಯರಿಗೆ ಮಕ್ಕಳಲ್ಲಿ, ಮಕ್ಕಳಿಗೆ ಹಿರಿಯರಲ್ಲಿ, ಹಿರಿಯನಾಗರಿಕರಿಗೆ ತಮ್ಮ ಮಕ್ಕಳು ಮೊಮ್ಮಕ್ಕಳಲ್ಲಿ ಹೀಗೆ ಒಬ್ಬರಿಗೊಬ್ಬರು ತಪ್ಪುಗಳನ್ನು ಹುಡುಕಿ ನಿಂದಿಸುವುದೋ, ವ್ಯಂಗ್ಯವಾಡುವುದೋ ಆದರೆ ಮನೆಯಲ್ಲಿ ನೆಮ್ಮದಿ ಎನ್ನುವುದು ಹೇಗೆ ತಾನೆ ಉಳಿಯುತ್ತದೆ? ಇದಕ್ಕೆ ಕಾರಣಗಳನ್ನು ಅರಿಯುವುದು ಅತ್ಯಂತ ಸರಳ. ಸ್ವಲ್ಪ ಊಹಿಸಿಕೊಳ್ಳೋಣ ೪-೫ ತಿಂಗಳ ಕೆಳಗೆ ನಮ್ಮ ಕುಟುಂಬದ ಬದುಕು ಹೇಗೆ ಸಾಗುತ್ತಿತ್ತು?
ಎಲ್ಲವೂ ಅತ್ಯಂತ ನಿಯಮಿತವಾಗಿತ್ತು. ಬೆಳಿಗ್ಗೆ ಏಳುತ್ತಿದ್ದಂತೆ ಅಡುಗೆಮನೆ ಎನ್ನುವುದು ಅತ್ಯಂತ ಚಟುವಟಿಕೆಯ ತಾಣವಾಗಿರುತ್ತಿತ್ತು. ಗೃಹಿಣಿಯಾದವರು ಗಂಡ ಮತ್ತು ಮಕ್ಕಳಿಗೆ ಬೆಳಗಿನ ತಿಂಡಿ, ಮತ್ತು ಕ್ಯಾರಿಯರ್ ಕಟ್ಟಲು ಊಟ ತಯಾರು ಮಾಡುತ್ತಿದ್ದರು. ಮಕ್ಕಳು ತಮ್ಮ ಶಾಲಾಕಾಲೇಜುಗಳಿಗೆ ಹೋಗಲು ಅಣಿಯಾಗುತ್ತಿದ್ದರು. ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾದರೆ ಇಬ್ಬರೂ ಹೊರಡುವ ತಯಾರಿ ನಡೆಸುತ್ತಿದ್ದರು. ಯಾರಿಗೂ ಯಾರನ್ನೂ ಗಮನಿಸುವುದಾಗಲೀ, ಟೀಕಿಸುವುದಾಗಲೀ ಮಾಡಲು ಪುರುಸೊತ್ತಾದರೂ ಎಲ್ಲಿತ್ತು? “ ಶೂ ಸರಿಯಾಗಿ ಹಾಕ್ಕೋ, ತಲೆ ಸರಿಯಾಗಿ ಬಾಚಿಕೋ, ಡಬ್ಬಿಲಿ ಊಟ ಉಳಿಸಿ ತರಬೇಡ, ಕಾಲೇಜಿಗೆ ಲೇಟಾಯ್ತಾ? ಬಸ್ಸಿಗೆ ಕೊಡಕ್ಕೆ ಚೊಲ್ಲರೆ ಇಟ್ಟುಕೋ” ಇಂಥಾ ಮಾಮೂಲಿ ಮಾತುಗಳೇ ಉರುಳುತ್ತಾ ಹೆಚ್ಚುಕಡಿಮೆ ಅದರ ಅರ್ಥವನ್ನೇ ಕಳೆದುಕೊಂಡು ಯಾಂತ್ರಿಕವೇ ಆಗಿಹೋಗುತ್ತಿತ್ತು.
ಆದರೆ ಈಗ ಅವೆಲ್ಲಕ್ಕೂ ಆಸ್ಪದವೇ ಇಲ್ಲದಂತೆ ಬದುಕಿನ ಬಂಡಿಯ ಬಣ್ಣವೇ ಬದಲಾಗಿ ಹೋಗಿದೆ. ಬೆಳಿಗ್ಗೆ ಹತ್ತುಗಂಟೆಗೆ ಏಳುವ ಗಂಡ, ಹನ್ನೊಂದಕ್ಕೆ ಏಳುವ ಮಗ, ರಾತ್ರಿ ಒಂಡುಗಂಟೆಯಾದರೂ ಮಲಗದ ಮಕ್ಕಳು, ಮನೆಯೊಡತಿಗೆ ಕಿರಿಕಿರಿಯನ್ನೇ ತಂದೊಡ್ಡುತ್ತಿವೆ. ವಾರಾಂತ್ಯದಲ್ಲಿ ಹೊಟೆಲ್ಲು, ಗೆಳೆಯರೊಡನೆ ಸುತ್ತಾಟ ಎನ್ನುತ್ತಿದ್ದ ಗಂಡನಿಗೆ ಹಗಲೂ ರಾತ್ರಿ ಮನೆಯೂಟ ಸಪ್ಪೆ ಎನಿಸುತ್ತಿದೆ. ಕೆಲಸದವಳೂ ಇಲ್ಲದೇ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ದುಡಿದೂ ದುಡಿದೂ ಹೈರಾಣದ ಗೃಹಿಣಿ ಕುದಿಯುವ ಕೆಂಡವಾಗಿದ್ದಾಳೆ. ಮಕ್ಕಳೋ ಸದಾ ಕಣ್ಣಿಗೆ ಮೊಬೈಲನ್ನೋ, ಟಿವಿಯನ್ನೋ ಕಂಪ್ಯೂಟರ್ ಅನ್ನೋ ಅಂಟಿಸಿಕೊಂಡು ಇಹಪರಗಳನ್ನು ಮರೆತೇ ಬಿಟ್ಟಿದ್ದಾರೆ! ಇಂಥಾ ವಾತಾವರಣ ಕುದಿಯುವ ಕುಲುಮೆಯಾಗದೇ ನೆಮ್ಮದಿಯ ತಾಣವಾಗಲು ಹೇಗೆ ಸಾಧ್ಯ?
ಈ ಕುಲುಮೆಯನ್ನು ಆರೋಗ್ಯವಾದ ಚಿಲುಮೆಯನ್ನಾಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಕುಟುಂಬದ ಎಲ್ಲರಲ್ಲೂ ಹುಟ್ಟಬೇಕು. ಕುಟುಂಬದ ಬಂಧನಗಳು ಮಧುರವೂ ಸುಲಲಿತವೂ ಆಗುವುದು ಭಾವನೆಗಳ ಕೊಡುಕೊಳ್ಳುವಿಕೆಗಳಿಂದ. ಸಿಟ್ಟು, ಕೋಪ, ತಿರಸ್ಕಾರ, ವ್ಯಂಗ್ಯ, ಇವುಗಳ ಕೊಡುಕೊಳ್ಳುವಿಕೆಗಳಾದರೆ ಅಲ್ಲಿ ಕುಲುಮೆ ಸ್ಥಾಪನೆಯಾದಂತೇ! ಅದರ ಜಾಗದಲ್ಲೇ ಪ್ರೀತಿ, ಕಾಳಜಿ, ಸಹಾಯದ ಸ್ವಭಾವ, ಭರವಸೆಗಳ ಕೊಡುಕೊಳ್ಳುವಿಕೆಯಾದರೆ ಅಲ್ಲಿ ಸುಂದರ ಚಿಲುಮೆ ಹುಟ್ಟುತ್ತದೆ. ಕುಟುಂಬವನ್ನು ಕುಲುಮೆಯೋ ಚಿಲುಮೆಯೋ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಭಾವನೆ ಮತ್ತು ಬಾಂಧವ್ಯಗಳು ನೀರು ಮತ್ತು ಸಕ್ಕರೆಯಂತೆ ಒಂದರೊಳಗೊಂದು ಮಿಳಿತವಾಗಬೇಕು.
ಸಕ್ಕರೆ ತನ್ನ ರುಚಿಯನ್ನು ನೀರಿಗೆ, ನೀರು ತನ್ನ ರೂಪವನ್ನು ಸಕ್ಕರೆಗೆ ಕೊಟ್ಟು ಸಮನ್ವಯ ಸಾಧಿಸುತ್ತವೆಯಲ್ಲ, ಹಾಗೆ ಪರಸ್ಪರರಲ್ಲಿ ಬಂಧುತ್ವ ಏಕತ್ರವಾಗಬೇಕು. ಇದು ಇಂದಿನ ಅತಿ ಅಗತ್ಯದ ವಿಷಯ. ಮುಂದೆ ಕೆಲವು ತಿಂಗಳುಗಳ ನಂತರ ಕರೊನಾ ಈ ವಿಶ್ವದಿಂದಲೇ ಮರೆಯಾಗಿ ಹೋಗಿಬಿಡಬಹುದು. ಆದರೆ ಇಂದಿನ ಒತ್ತಡದ ಕಾರಣ ಕುಟುಂಬದ ಸದಸ್ಯರು ಪರಸ್ಪರರಲ್ಲಿ ಹೃದಯಕ್ಕೆ ಗಾಯ ಮಾಡಿಕೊಂಡರೆ, ಆ ಗಾಯದ ಕಲೆ ಹಾಗೇ ಉಳಿದು, ಕರೊನಾ ಹೋದರೂ ಸಂಬಂಧದ ಒಡಕು ಹಾಗೇ ಉಳಿದುಬಿಡುತ್ತದೆ. ಆದ್ದರಿಂದ ಇವತ್ತು ನಮ್ಮೆಲ್ಲರ ಮುಂದಿರುವ ದೊಡ್ಡ ಚಾಲೆಂಜ್ ಎಂದರೆ ಕುಟುಂಬದ ಬಾಂಧವ್ಯವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳುವುದು. ಆರೋಗ್ಯದ ನಿಯಮಗಳನ್ನು ಪಾಲಿಸುವ ನಾವು ಕೈತೊಳೆಯುವುದರ ಜೊತೆ ಮನದ ಕಹಿ ಭಾವಗಳನ್ನು ತೊಳೆದುಬಿಡೋಣ. ಮಾಸ್ಕ್ ಧರಿಸುವುದರ ಜೊತೆ ವ್ಯಂಗ್ಯ, ಕಟು ಟೀಕೆಗಳಿಗೂ ಮಾಸ್ಕ್ ತೊಡೆಸಿಬಿಡೋಣ. ಎಲ್ಲ ಕಡೆ ಸ್ಯಾನಿಟೈಸರ್ ಬಳಸುವ ಹಾಗೇ ಮನಸ್ಸಿನ ನೆಗೆಟೀವ್ ಭಾವನೆಗಳನ್ನೂ ಸ್ಯಾನಿಟೈಸ್ ಮಾಡೋಣ. ಕುಟುಂಬವನ್ನು ನಗುವಿನೊಂದಿಗೆ ಆರೋಗ್ಯಕರವಾಗಿ ಉಳಿಸಿಕೊಳ್ಳೋಣ.
ಎರಡನೇ ಮುಖ್ಯ ಕೆಲಸ ನಾವೀಗ ಮಾಡಬೇಕಾಗಿರುವುದು ನಮ್ಮ ನಮ್ಮ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಕುಟುಂಬದ ಆರೋಗ್ಯಕ್ಕೆ ಹೊರಗೆ ’ ನೆಗೆಟೀವ್ ಎನರ್ಜಿ ’ ಹರಡದಂತೆ ಕಾಪಾಡಿಕೊಂಡರೆ, ನಮ್ಮ ಮಿದುಳಿನ ಆರೋಗ್ಯಕ್ಕೆ ನಮ್ಮೊಳಗೆ ’ ನೆಗೆಟೀವ್ ಎಮೋಷನ್ಸ್ ’ ಪದಾರ್ಪಣ ಮಾಡದಂತೆ ತಡೆಗಟ್ಟಬೇಕಾಗಿದೆ. ದಿನಪತ್ರಿಕೆಗಳನ್ನು ಓದಿದಾಗ, ಟಿವಿಯಲ್ಲಿ ವಾರ್ತೆಗಳನ್ನು ಕೇಳಿದಾಗ ಇಡೀ ವಿಶ್ವದಲ್ಲಿ ಲಕ್ಷ ಲಕ್ಷ ಜನ ರೋಗಕ್ಕೆ ಬಲಿಯಾಗಿ ಸಾಯುತ್ತಿರುವ ಸುದ್ದಿಯೇ ಬಿತ್ತರವಾಗುತ್ತಿರುತ್ತದೆ. ಇದನ್ನು ನೋಡಿದ ಕೇಳಿದ ಯಾರಿಗಾದರೂ ’ ಭಯ ’ ಎನ್ನುವುದು ಸಹಜವಾಗಿಯೇ ಹುಟ್ಟುತ್ತದೆ. ಈ ಭಯದ ಭಾವನೆ ಆಳವಾಗಿ ಮಿದುಳಿನಲ್ಲಿ ಇಳಿಯದಂತೆ ಜಾಗೃತರಾಗಿರಬೇಕಾದ್ದು ನಮ್ಮಮುಂದಿರುವ ಚಾಲೆಂಜ್. “ ನಾನು ಈ ರೋಗವನ್ನು ನನಗಾಗಲೀ, ನನ್ನ ಮನೆಯ ಸದಸ್ಯರಿಗಾಗಲೀ ಬಾರದಂತೆ ಎಚ್ಚರ ವಹಿಸುತ್ತೇನೆ “ ಎನ್ನುವ ದೃಢ ಸಂಕಲ್ಪ ಮಾಡಿಕೊಂಡರೆ ಈ ಭಯ ಅಷ್ಟು ಬಾಧಿಸುವುದಿಲ್ಲ. ಸಂಕಲ್ಪ ದೃಢವಾಗಿಲ್ಲದಾಗ ಭಯ ಆವರಿಸಿಕೊಳ್ಳುತ್ತದೆ. ಈಗ ಎಷ್ಟೋ ಜನ ಯುವಕರು ಈ ಅತಿಯಾದ ಭಯದಿಂದಲೇ ಆತ್ಮಹತ್ಯೆಯಂಥಾ ದಾರುಣತೆಗೆ ಬಲಿಯಾಗುತ್ತಿದ್ದಾರೆ. ಒಮ್ಮೆ ಈ ಭಯ ಮಿದುಳಿನಲ್ಲಿ ಉಳಿದು ಬಿಟ್ಟರೆ ಅದು ಇತರ ಕೋಮಲವಾದ ಧನಾತ್ಮಕವಾದ ಭಾವನೆಗಳನ್ನೂ ಇಲ್ಲದಂತೆ ಮಾಡಿಬಿಡುತ್ತದೆ. ಭಯದ ಆಳ ಯಾವ ಕಾರಣಕ್ಕೂ ಹೆಚ್ಚಾಗಬಾರದು. ನಾಳೆ ಕರೊನಾ ಈ ವಿಶ್ವದಿಂದಲೇ ಮಾಯವಾದರೂ, ನಮ್ಮಲ್ಲಿಳಿದಿರುವ ಈ ಭಯ ’ ಫೋಬಿಯಾ ಡಿಸಾರ್ಡರ್ ’ ಆಗಿ ಮುಂದಿನ ನಮ್ಮ ಬದುಕನ್ನೇ ದುಸ್ತರ ಮಾಡಬಹುದಲ್ಲವೇ? ಆದ್ದರಿಂದ ಭಯವನ್ನು ತೊಡೆದು ಹಾಕೋಣ.
ಈ ಕರೊನಾ ಕಾರಣದಿಂದ ಹುಟ್ಟುತ್ತಿರುವ ಮತ್ತೊಂದು ಭಾವನೆ ’ ಅನುಮಾನ ’ . ’ ಪಕ್ಕದ ಮನೆಯವರನ್ನು ಮಾತಾಡಿಸುವುದು ಬೇಡ, ಅವರಿಗೇನಾದರೂ ಕರೊನಾ ಇದ್ದರೆ ’?, ಕೆಲಸದವಳನ್ನು ಒಳಗೆ ಬಿಡುವುದು ಬೇಡ, ಅವಳಿಂದ ಕರೊನಾ ಬಂದರೆ ’ ಹೀಗೆಲ್ಲಾ ಅತಾರ್ಕಿಕ ಅನುಮಾನಗಳು ಇವತ್ತು ಎಲ್ಲರನ್ನೂ ಬಾಧಿಸುತ್ತಿದೆ. ಈ ಅನುಮಾನದ ಅತಿರೇಕಗಳನ್ನು ನಾವು ಟಿವಿಯಲ್ಲಿಯೂ ಪತ್ರಿಕೆಯಲ್ಲಿಯೂ ನೋಡುತ್ತಿರುತ್ತೇವೆ. ತಮ್ಮ ಊರಿಗೇ ಬರದಂತೆ ತಡೆಯುವುದು, ತಮ್ಮ ಕೇರಿಗೇ ಬಾರದಂತೆ ತಡೆಯೊಡ್ಡುವುದು ಹೀಗೆಲ್ಲಾ ನಡೆಯುತ್ತಿವೆ. ಇವೆಲ್ಲಾ ಎಷ್ಟು ಸರಿ ಎಷ್ಟು ತಪ್ಪು ಎನ್ನುವ ಚರ್ಚೆ ಇಲ್ಲಿ ಬೇಡ. ಆದರೆ ಹೀಗೆ ಅನುಮಾನದ ಹುಳ ಒಮ್ಮೆ ಮೆದುಳು ಹೊಕ್ಕರೆ ಮುಂದೆ ಅದು ’ ಪ್ಯಾರಾನೈಡ್ ಡಿಸಾರ್ಡರ್ ’ ಆಗಿ ನಮ್ಮ ವ್ಯಕ್ತಿತ್ವವನ್ನೇ ಅಲ್ಲಾಡಿಸಬಹುದು. ಇಂಥಾ ಡಿಸಾರ್ಡರ್ ಇರುವವರೊಡನೆ ಬದುಕಲು ಮನೆಯವರಿಗೆ ತುಂಬಾ ಕಷ್ಟವೂ ಆಗಬಹುದು. ಆದ್ದರಿಂದ ’ ಅನುಮಾನ ’ ಎನ್ನುವುದು ಮಿತಿಯಲ್ಲಿ ಇರಲಿ. ಅತಿಯಾಗುವುದು ಬೇಡ.
ಈ ಲೇಖನದ ಮುಖ್ಯ ಉದ್ದೇಶವೇನೆಂದರೆ ಇಂದಿನ ಕರೊನಾತಂಕದ ದುಃಸ್ಥಿತಿಯಲ್ಲಿ ಪ್ರತಿಯೊಬ್ಬರೂ ’ ಸಹನೆ ಮತ್ತು ಧೈರ್ಯಗಳನ್ನು ಅತ್ಯವಶ್ಯಕವಾಗಿ ಉಳಿಸಿಕೊಳ್ಳಬೇಕು ಮತ್ತು ಬೆಳೆಸಿಕೊಳ್ಳಬೇಕು. ಇವೆರಡೇ ನಮ್ಮ ಮುಂದಿನ ಬದುಕಿನ ದಾರಿದೀಪವಾಗುತ್ತದೆ.
ನಿಮ್ಮಲ್ಲೂ ಇಂಥ ಸಮಸ್ಯೆಗಳು ಇವೆಯೆ? ಮಾನಸಿಕವಾಗಿ ತೊಂದರೆಗೆ ಒಳಗಾಗಿರುವಿರಾ? ಹಾಗಿದ್ದರೆ ನಿಮ್ಮ ಪ್ರಶ್ನೆಗೆ ಡಾ.ಶಾಂತಾ ನಾಗರಾಜ್ ಅವರು ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ಇ-ಮೇಲ್ ಐಡಿ: shanthanag@gmail.com / lalitha.vijayavani@gmail.com
vijayavani.net ನ ಅಂಕಣ ವಿಭಾಗದ ನಂದೊಂದು ಕಥೆ ವಿಭಾಗದಲ್ಲಿ ಡಾ.ಶಾಂತಾ ನಾಗರಾಜ್ ಅವರು ಬರೆದಿರುವ ಇತರ ಲೇಖನಗಳು ಲಭ್ಯ.