

ಬಾಲಿವುಡ್ನ ಯಶಸ್ವೀ ಸಿನಿಮಾ ಸರಣಿಗಳ ಸಾಲಿನಲ್ಲಿ ಹೃತಿಕ್ ರೋಷನ್ ಅಭಿನಯದ, ಅವರ ತಂದೆ ರಾಕೇಶ್ ರೋಷನ್ ನಿರ್ದೇಶಿಸಿದ್ದ "ಕ್ರಿಷ್' ಸರಣಿ ಮೊದಲು ನಿಲ್ಲುತ್ತದೆ. 2003ರಲ್ಲಿ "ಕೋಯಿ ಮಿಲ್ ಗಯಾ' ಬಿಡುಗಡೆಯಾಗಿ ಹೊಸ ಸೂಪರ್ಹೀರೋಅನ್ನು ಪ್ರೇಕ್ಷಕರಿಗೆ ಪರಿಚಯಿಸಿತ್ತು. ನಂತರ 2006ರಲ್ಲಿ "ಕ್ರಿಷ್' ತೆರೆಗೆ ಬಂದು ಸಕ್ಸಸ್ಫುುಲ್ ಸರಣಿ ಪ್ರಾರಂಭಿಸಿತ್ತು. ನಂತರ 2013ರಲ್ಲಿ "ಕ್ರಿಷ್ 3' ರಿಲೀಸ್ ಆಗಿ, ಈ ಸರಣಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ಒಟ್ಟು 160 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಈ ಮೂರು ಚಿತ್ರಗಳು ಬಾಕ್ಸಾಫಿಸಿನಲ್ಲಿ 550 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿಕೊಂಡಿದ್ದವು.
ಕಳೆದ ಕೆಲ ವರ್ಷಗಳಿಂದ "ಕ್ರಿಷ್ 4' ಬಗ್ಗೆ ಆಗೊಮ್ಮೆ ಈಗೊಮ್ಮೆ ಸುದ್ದಿಗಳಾಗುತ್ತಿದ್ದರೂ, ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಇದೀಗ ರಾಕೇಶ್ ರೋಷನ್ "ಕ್ರಿಷ್ 4' ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ. ವಿಶೇಷ ಅಂದರೆ ಈ ಚಿತ್ರದ ಮೂಲಕ ನಟ ಹೃತಿಕ್ ರೋಷನ್ ಡೈರೆಕ್ಟರ್ ಕ್ಯಾಪ್ ಧರಿಸಲಿದ್ದಾರೆ.
ಜಾಲತಾಣದಲ್ಲಿ ಹೃತಿಕ್ ಜತೆಗಿರುವ ಫೋಟೋ ಹಂಚಿಕೊಂಡು, "25 ವರ್ಷಗಳ ಹಿಂದೆ ನಿನ್ನನ್ನು ನಟನಾಗಿ ಲಾಂಚ್ ಮಾಡಿದ್ದೆ. ಇದೀಗ 25 ವರ್ಷಗಳ ನಂತರ ಮತ್ತೆ ನಿನ್ನನ್ನು ನಿರ್ದೇಶಕನನ್ನಾಗಿ ಲಾಂಚ್ ಮಾಡುತ್ತಿದ್ದೇನೆ. ನಾನು, ಆದಿತ್ಯ ಚೋಪ್ರಾ ಜತೆ ನಿರ್ಮಾಪಕನಾಗಿ ನಿಂತು ನಮ್ಮ ಈ ಮಹಾತ್ವಾಕಾಂೆಯ ಸರಣಿಯನ್ನು ಮುಂದುವರಿಸುತ್ತಿರುವುದು ಖುಷಿ ನೀಡಿದೆ' ಎಂದು ಸಂತಸ ಹಂಚಿಕೊಂಡಿದ್ದಾರೆ ರಾಕೇಶ್. ಮೂಲಗಳ ಪ್ರಕಾರ "ಕ್ರಿಷ್ 4' ಸದ್ಯ ಪ್ರಿ&ಪ್ರೊಡಕ್ಷನ್ ಹಂತದಲ್ಲಿದ್ದು, 2026ರಲ್ಲಿ ಸೆಟ್ಟೇರಲಿದೆ ಎನ್ನಲಾಗಿದೆ.