

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-2 ಲಿತಾಂಶ ಪ್ರಕಟವಾದ ನಂತರವೇ ಸಿಇಟಿ ಲಿತಾಂಶ ಪ್ರಕಟಿಸಲಾಗುತ್ತದೆ. ಎರಡೂ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದಿರುವುದನ್ನೇ ಪರಿಗಣಿಸಿ ಸಿಇಟಿ ಲಿತಾಂಶ ಪ್ರಕಟಿಸಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಂದೇಹ ಬೇಡ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ವಿದ್ಯಾರ್ಥಿಗಳ ಗೊಂದಲಗಳನ್ನು ಪರಿಹರಿಸಿದರು.
ಸಿಇಟಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿರುವ ಗೊಂದಲ, ಅನುಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೋಮವಾರ ‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ೆನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವ ಅಥವಾ ಅನುತ್ತೀರ್ಣರಾಗಿರುವವರಿಗೆ ಇನ್ನೂ ಫಲಿತಾಂಶವನ್ನು ಉತ್ತಮ ಮಾಡಿಕೊಳ್ಳಲು ಅವಕಾಶ ಇರುವ ಕಾರಣ ಯಾರೂ ಸಿಇಟಿ ಬರೆಯುವುದನ್ನು ತಪ್ಪಿಸಿಕೊಳ್ಳಬಾರದು. ಹೀಗಾಗಿ ಯಾರೆಲ್ಲ ಶುಲ್ಕ ಪಾವತಿಸಿದ್ದೀರೊ ಅವರೆಲ್ಲರೂ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆ ಬರೆಯಬೇಕು. ದ್ವಿತೀಯ ಪಿಯುಸಿಯ 3ನೇ ಪರೀಕ್ಷೆಯ ಅಂಕಗಳನ್ನು ಪಡೆದು ರ‌್ಯಾಂಕ್ ನೀಡುವ ವ್ಯವಸ್ಥೆ ಕೂಡ ಇದ್ದು, ಯಾರೂ ಇದರಿಂದ ಅವಕಾಶ ವಂಚಿತರಾಗಬಾರದು ಎಂದು ಸಲಹೆ ನೀಡಿದರು.
ಫೆೇಸ್ ರೆಕಾಗ್ನಿಷನ್, ಕ್ಯೂಆರ್ ಕೋಡ್‌ನಲ್ಲಿ ಪರಿಶೀಲನೆ
ಪೊಲೀಸ್/ ಗೃಹ ರಕ್ಷಕ ದಳದ ಸಿಬ್ಬಂದಿ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರದೊಳಗೆ ಬಿಡುವುದು. ಹೀಗಾಗಿ ಕನಿಷ್ಠ ಒಂದೂವರೆ ಗಂಟೆ ಮುಂಚೆಯೇ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಗಳು ಬಂದು ತಪಾಸಣೆಗೆ ಒಳಗಾಗಬೇಕು. ಅಭ್ಯರ್ಥಿಯ ಮುಖ ಚಹರೆ ಮತ್ತು ಕ್ಯೂಆರ್ ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಅಕ್ರಮವಾಗಿ ನಕಲು ಅಭ್ಯರ್ಥಿಗಳೂ ಪರೀಕ್ಷೆ ಬರೆಯುವುದನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ.
ಹೀಗಾಗಿ ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಯಾವುದೇ ಮೋಸ ಆಗಲು ಬಿಡುವುದಿಲ್ಲ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಭದ್ರತೆ, ಸುರಕ್ಷತೆಗಾಗಿ ಇರುವ ವಸ ಸಂಹಿತೆ ಪಾಲಿಸಿ
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ವಸ್ತ್ರ ಸಂಹಿತೆ ಮಾಡಿದ್ದು, ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಹಾಕಿಕೊಂಡು ಬಂದರೆ ಉತ್ತಮ. ಪುರುಷರು, ಜೇಬು ಇಲ್ಲದ/ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ/ಜೀನ್ಸ್ ಪ್ಯಾಂಡ್ ಹಾಗೂ ಶೂ ನಿಷೇಧಿಸಲಾಗಿದೆ. ಮೊಬೈಲ್, ಪೆನ್‌ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಒಮ್ಮೆ ಕೆಇಎ ವೆಬ್ಸೈಟ್‌ನಲ್ಲಿ ಇರುವ ವಸ್ತ್ರ ಸಂಹಿತೆಯ ವಿವರಗಳನ್ನು ಓದಿಕೊಂಡು, ಆ ಪ್ರಕಾರ ಪರೀಕ್ಷೆಗೆ ಬರಬೇಕು ಎಂದು ಅವರು ಸಲಹೆ ನೀಡಿದರು.
ಕೊನೇ ಕ್ಷಣದವರೆಗೂ ಶೈಕ್ಷಣಿಕ ದಾಖಲೆ ಪರಿಶೀಲನೆಗೆ ಅವಕಾಶ
ಹಿಂದೆಲ್ಲಾ ದಾಖಲೆ ಪರಿಶೀಲನೆ ಮಾಡುವುದೇ ಹರಸಾಹಸವಾಗಿತ್ತು. ವಿದ್ಯಾರ್ಥಿಗಳು ಉದ್ದುದ್ದ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯ್ದು ಶೈಕ್ಷಣಿಕ ಮತ್ತು ಮೀಸಲಾತಿ ಕೋರಿರುವ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕಿತ್ತು. ಆದರೆ, ಈಗ ತುಂಬಾ ಸರಳೀಕರಣಗೊಳಿಸಲಾಗಿದೆ. ಶೈಕ್ಷಣಿಕ ದಾಖಲೆಗಳಾದ ಕನ್ನಡ ಮಾಧ್ಯಮ, ಗ್ರಾಮೀಣ ವಿದ್ಯಾರ್ಥಿ ದಾಖಲೆಗಳನ್ನು ತಮ್ಮ ಕಾಲೇಜಿನಲ್ಲಿಯೇ ಪರಿಶೀಲಿಸಿಕೊಳ್ಳಬಹುದು. ಮೀಸಲಾತಿ ಕೋರಿರುವ 371 ಜೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ಡಿ ಸಂಖ್ಯೆಯನ್ನು ನಮೂದಿಸಿದರೆ ಆನ್‌ಲೈನ್‌ನಲ್ಲಿಯೇ ಕಂದಾಯ ಇಲಾಖೆ ನೀಡಿರುವ ಪ್ರಮಾಣಪತ್ರ ಪರಿಶೀಲಿನೆಯಾಗಲಿದೆ.
ಇನ್ನು ಹೆಸರು, ತಂದೆ-ತಾಯಿ, ಹೆಸರು ಸೇರಿ ಸಣ್ಣ ಪುಟ್ಟ ವ್ಯಾಕರಣಗಳನ್ನು ತಪ್ಪಾಗಿ ನಮೂದಿಸಿದ್ದರೆ, ಕೊನೇ ಕ್ಷಣದ ವರೆಗೂ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳು ಈ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.
ಬಿಎಸ್‌ಸಿ ಸೈಬ್ಸ್, ವೆಟರ್ನರಿ, ಅಲೈಡ್ ಸೈನ್ಸ್‌ಗೂ ಇದೆ ಬೇಡಿಕೆ
ಸಿಇಟಿ ಎಂದಾಕ್ಷಣ ಎಲ್ಲ ವಿದ್ಯಾರ್ಥಿಗಳೂ ಇಂಜಿನಿಯರಿಂಗ್‌ಗೆ ಮೊದಲ ಆದ್ಯತೆ ನೀಡುತ್ತಾರೆ. ಅದರಲ್ಲಿಯೂ ಕಂಪ್ಯೂಟರ್ ಸೈನ್ಸ್ ಸೀಟು ಸಿಗದಿದ್ದಲ್ಲಿ ಬೇಸರ ಮಾಡಿಕೊಳ್ಳುತ್ತಾರೆ. ಇಂಜಿನಿಯರಿಂಗ್ ಸಮಾನವಾಗಿ ಪಶು ವೈದ್ಯಕೀಯ, ಬಿಎಸ್‌ಸಿ ಸೈನ್ಸ್ ಮತ್ತು ಅಲೈಡ್ ಸೈನ್ಸ್‌ಗೂ ಬೇಡಿಕೆ ಇದೆ. ನರ್ಸಿಂಗ್ ಕೋರ್ಸ್‌ಗಳಿಗೂ ತನ್ನದೇ ಬೇಡಿಕೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಒಂದಕ್ಕೇ ಅಂಟಿಕೊಳ್ಳದೆ ಅಥವಾ ಕಂಪ್ಯೂಟರ್ ಸೈನ್ಸ್ ಸೀಟು ಸಿಗಲಿಲ್ಲ ಎಂಬ ಹತಾಶೆರಾಗದೆ ಬೇರೆ ಕೋರ್ಸ್‌ಗಳತ್ತಲೂ ಗಮನ ಹರಿಸುವಂತೆ ಸಲಹೆ ನೀಡಿದರು.
ನರ್ಸಿಂಗ್ ಸೀಟ್ ಮ್ಯಾಟ್ರಿಕ್ಸ್‌ಬೇಗ ನೀಡಲು ಮನವಿ
ಇಂಜಿನಿಯರಿಂಗ್ ಸೀಟು ಹಂಚಿಕೆಯಾಗಿ ಪ್ರಕ್ರಿಯೆ ಮುಗಿದರೂ ನರ್ಸಿಂಗ್ ಸೀಟು ಹಂಚಿಕೆ ಮಾತ್ರ ಮುಗಿಯಲ್ಲ. ಈ ಕಾರಣದಿಂದ ಈ ಬಾರಿ ಮೇ ಎರಡನೇ ವಾರದೊಳಗೆ ನರ್ಸಿಂಗ್ ಸೀಟ್ ಮ್ಯಾಟ್ರಿಕ್ಸ್ ನೀಡುವಂತೆ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಕೋರಲಾಗಿದೆ. ಕಳೆದ ಎರಡು ವರ್ಷಗಳಿಂದ ನರ್ಸಿಂಗ್ ಸೀಟು ಹಂಚಿಕೆಯನ್ನು ಕೆಇಎ ಮೂಲಕ ನಡೆಸುತ್ತಿರುವುದರಿಂದ ಅಕ್ರಮ ಸೀಟು ಹಂಚಿಕೆ ಮತ್ತು ಹೆಚ್ಚುವರಿ ಶುಲ್ಕಕ್ಕೂ ಕಡಿವಾಣ ಹಾಕಲಾಗಿದೆ ಎಂದು ವಿವರಿಸಿದರು.
ಸರ್ಕಾರಿ ಕಾಲೇಜುಗಳಲ್ಲಿಯೇ ಸಿಇಟಿ ತರಬೇತಿಗೆ ಚಿಂತನೆ
ಸಿಇಟಿ ರ‌್ಯಾಂಕ್ ಪಟ್ಟಿಯಲ್ಲಿ ಖಾಸಗಿ ಕಾಲೇಜುಗಳು ಮತ್ತು ಕೇಂದ್ರ ಪಠ್ಯಕ್ರಮದ ಸಿಬಿಎಸ್‌ಇ ವಿದ್ಯಾರ್ಥಿಗಳೇ ಟಾಪ್ ರ‌್ಯಾಂಕ್ ಪಡೆಯುತ್ತಿದ್ದಾರೆ. ಇದರಿಂದ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗುವ ಜತೆಗೆ ಸರ್ಕಾರಿ ಕಾಲೇಜುಗಳ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಬದಲಾಯಿಸುವ ದೃಷ್ಟಿಯಿಂದ ದ್ವಿತೀಯ ಪಿಯುಸಿ ಮುಗಿದ ಬಳಿಕ ಸರ್ಕಾರಿ ಕಾಲೇಜುಗಳಲ್ಲಿಯೇ ಸಿಇಟಿ ತರಬೇತಿಗೆ ಚಿಂತನೆ ನಡೆಸಲಾಗಿದೆ. ಈ ಬಾರಿ ಪ್ರಾಯೋಗಿಕವಾಗಿ ವೀಡಿಯೋ ರೆಕಾರ್ಡರ್‌ಗಳನ್ನು ಪ್ರಸಾರ ಮಾಡಲಾಗಿದೆ.
ಸರ್ಕಾರಿ ಕಾಲೇಜು ಉಪನ್ಯಾಸಕರು ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ತೆರಳುವುದರಿಂದ ಲಭ್ಯವಾಗುವುದಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಸರ್ಕಾರಿ ಕಾಲೇಜು ಉಪನ್ಯಾಸಕೇ ಬೆಸ್ಟ್
ಗ್ರಾಮೀಣ ಭಾಗದಲ್ಲಿ ಮಕ್ಕಳು ಖಾಸಗಿ ಕೋಚಿಂಗ್ ಸೇರಿ ಹಲವೆಡೆ ಸಿಇಟಿ ಕೋಚಿಂಗ್ ಪಡೆಯುತ್ತಾರೆ. ಆದರೆ, ನನ್ನ ಪ್ರಕಾರ ಸರ್ಕಾರಿ ಕಾಲೇಜಿನ ಉಪನ್ಯಾಸಕರಷ್ಟು ಜ್ಞಾನ ಹೊಂದಿರುವವರು ಮತ್ತೊಬ್ಬರಿಲ್ಲ. ಪ್ರಶ್ನೆಪತ್ರಿಕೆ ಸೆಟ್ ಮಾಡುವುದು, ಮೌಲ್ಯಮಾಪನ ಕಾರ್ಯ, ಸಿಲಬಸ್ ಸಿದ್ಧಪಡಿಸುವ ಕಾರ್ಯ ಸೇರಿ ಹತ್ತಾರು ಕಾರ್ಯದಲ್ಲಿ ಸರ್ಕಾರಿ ಕಾಲೇಜು ಉಪನ್ಯಾಸಕರೇ ಭಾಗವಹಿಸುವುದರಿಂದ ಉತ್ತಮ ಜ್ಞಾನವಂತರಾಗಿದ್ದಾರೆ ಎಂದರು.
ಸಿಲಬಸ್‌ನಲ್ಲಿ ಕಳೆದ ವರ್ಷದ ಪ್ರಕರಣ ಮರುಕಳಿಸಲ್ಲ
ಕಳೆದ ವರ್ಷ ಪಿಯು ಇಲಾಖೆ ಮತ್ತು ಕೆಇಎ ನಡುವಿನ ಕೆಲವು ಸಂವಹನ ಕೊರತೆಯಿಂದ ಸಮಸ್ಯೆ ಉಂಟಾಗಿತ್ತು. ಈ ಬಾರಿ ಪಿಯು ಇಲಾಖೆ, ಕಾಲೇಜುಗಳಲ್ಲಿ ಬೋಧಿಸುವ ಉಪನ್ಯಾಸಕರಲ್ಲಿ ಗೊಂದಲ ಬಗೆಹರಿಸಲಾಗಿದೆ. ಕೆಇಎ ವೆಬ್‌ಸೈಟ್‌ನಲ್ಲಿಯೂ ಪಠ್ಯಕ್ರಮ ಪ್ರಕಟಿಸಲಾಗಿದೆ. ಯಾವುದೇ ಗೊಂದಲವಿಲ್ಲ. ಎನ್‌ಸಿಇಆರ್‌ಟಿ ಪಠ್ಯಕ್ರಮದಂತೆಯೇ ಪರೀಕ್ಷೆ ನಡೆಯಲಿದೆ. ಅದನ್ನು ಓದಿಕೊಂಡರೆ ಸಾಕು ಎಂದು ತಿಳಿಸಿದರು.
ಒಎಂಆರ್ ನೀಡಿ ಗ್ರಾಮೀಣ ವಿದ್ಯಾರ್ಥಿಗಳಿಗೆ ತರಬೇತಿ
ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ಗೊಂದಲಕ್ಕೆ ಸಿಲುಕುವುದು ಬೇಡ ಎಂಬ ಕಾರಣದಿಂದ ಸರ್ಕಾರಿ ಕಾಲೇಜು ಮತ್ತು ಗ್ರಾಮೀಣ ವಿದ್ಯಾರ್ಥಿಯ ಪ್ರತಿಯೊಬ್ಬರಿಗೂ ನಾಲ್ಕು ಒಎಂಆರ್ ಶೀಟ್‌ಗಳನ್ನು ನೀಡಿ ತರಬೇತಿ ನೀಡಲಾಗಿದೆ.