

ಚ್ಯವನಪ್ರಾಶ್ ಆಯುರ್ವೆದದಲ್ಲಿ ಹೇಳಿದ ಸಾವಿರಾರು ಔಷಧಗಳಲ್ಲಿ ಒಂದಾದರೂ ಇದು ಭಿನ್ನವಾದದ್ದು. ಆಯುರ್ವೆದ ವೈದ್ಯರು ರೋಗಿಗಳಿಗೆ ಲೇಹ್ಯ ಎಂದರೆ ಗೊತ್ತಾಗುವುದಿಲ್ಲ ಎಂಬ ಕಾರಣಕ್ಕೆ ‘ಚ್ಯವನಪ್ರಾಶ್ ಥರದ ಔಷಧ’ ಎನ್ನುತ್ತಾರೆ. ಈಗ ಕೋವಿಡ್-19 ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸಲು ಚ್ಯವನಪ್ರಾಶ್ ಸೇವಿಸುವಂತೆ ಆಯುಷ್ ಸಚಿವಾಲಯ ಸೂಚಿಸಿದ ನಂತರವಂತೂ ಚ್ಯವನಪ್ರಾಶ್ ಖ್ಯಾತಿ ಉತ್ತುಂಗಕ್ಕೇರಿದೆ. ಶ್ವಾಸಾಂಗವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಂದರೆ ಕೆಮ್ಮು, ದಮ್ಮುಗಳಲ್ಲಿ, ದೇಹ ಸೊರಗಿಹೋದಾಗ, ಹೃದ್ರೋಗ, ಮೂತ್ರ ಮತ್ತು ಲೈಂಗಿಕ ಸಮಸ್ಯೆಗಳ ಪರಿಹಾರದಲ್ಲಿ ಅತ್ಯುತ್ತಮವಾದದ್ದು. ಮನುಷ್ಯನ ಮೇಧಾಶಕ್ತಿ, ಸ್ಮರಣಶಕ್ತಿ, ಜೀರ್ಣಶಕ್ತಿ, ದೇಹದ ಕಾಂತಿ, ದೇಹಬಲ, ಲೈಂಗಿಕ ಶಕ್ತಿ, ಇಂದ್ರಿಯಬಲ ಇತ್ಯಾದಿಗಳನ್ನು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಚ್ಯವನಪ್ರಾಶದ ನಿತ್ಯ ಸೇವನೆಯಿಂದ ಇದು ಸಾಧ್ಯ.
ನಿತ್ಯದ ಊಟದ ಪ್ರಮಾಣದಲ್ಲಿ ವ್ಯತ್ಯಾಸವಾಗದಷ್ಟು ಪ್ರಮಾಣದಲ್ಲಿ ಇದನ್ನು ಸೇವಿಸಬಹುದು. ಚ್ಯವನಪ್ರಾಶ್ನಿಂದ ಇಷ್ಟೊಂದು ಪ್ರಯೋಜನವಿದೆ ಎಂಬುದು ನಿಜ. ಆದರೆ ಚ್ಯವನಪ್ರಾಶ್ ಎಂಬ ಲೇಬಲ್ ಇರುವ ಎಲ್ಲ ಡಬ್ಬಗಳಲ್ಲೂ ಚ್ಯವನಪ್ರಾಶ್ ಲೇಹ್ಯವೇ ಇರಬೇಕೆಂದಿಲ್ಲ. ಚ್ಯವನಪ್ರಾಶ್ ಹೆಸರಿನಲ್ಲಿ ಇನ್ನೇನೋ ಕೊಡುವ ರೂಢಿ ಮೊದಲಿನಿಂದಲೂ ಇದೆ. ಯಾವುದು ಅಸಲಿ ಯಾವುದು ನಕಲಿ ಎಂಬುದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಒಂದು ಮಿನಿ ಚ್ಯವನಪ್ರಾಶ್ ಮಾಡುವ ವಿಧಾನವನ್ನು ತಿಳಿಯೋಣ. ಇದು ಚ್ಯವನಪ್ರಾಶ್ನಷ್ಟು ಶ್ರೇಷ್ಠವಲ್ಲವಾದರೂ ನಕಲಿ ಚ್ಯವನಪ್ರಾಶ್ಗಿಂತ ಉತ್ತಮ ಫಲಿತಾಂಶ ಕೊಡುತ್ತದೆ.
ಇದನ್ನೂ ಓದಿ: ಮಾನವ ಕರುಳಿನಲ್ಲೂ ವೃದ್ಧಿಸುವ ಕರೊನಾ 19 ವೈರಾಣು
ಸುಮಾರು ಒಂದು ಕೆಜಿ ತಾಜಾ ಬೆಟ್ಟದ ನೆಲ್ಲಿಕಾಯಿಯನ್ನು ತೆಗೆದುಕೊಳ್ಳಬೇಕು. ಈ ಕಾಲದಲ್ಲಿ ತಾಜಾ ನೆಲ್ಲಿಕಾಯಿ ಸಿಗುವುದು ಕಷ್ಟವಾಗಬಹುದಾಗಿದ್ದರಿಂದ ಕಾಲು ಕೆಜಿ ಒಣನೆಲ್ಲಿಕಾಯಿಯನ್ನು ತೆಗೆದುಕೊಳ್ಳಬಹುದು. ಹೈಬ್ರಿಡ್ ನೆಲ್ಲಿಗಿಂತ ಬೆಟ್ಟದ ನೆಲ್ಲಿ ಶ್ರೇಷ್ಠ. ಹಸಿ ನೆಲ್ಲಿಕಾಯಿಗಳನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಗೋಧಿಹಿಟ್ಟಿನ ಜರಡಿಯಲ್ಲಿ ಅದನ್ನು ತಿಕ್ಕಿ ನೆಲ್ಲಿಕಾಯಿಯ ತಿರುಳನ್ನು (ಟ್ಠ್ಝ) ಬೇರೆ ಮಾಡಿಕೊಳ್ಳಬೇಕು. ಒಣನೆಲ್ಲಿಕಾಯಿಯಾದರೆ ಅದರ ಪುಡಿಯನ್ನೇ ನೇರವಾಗಿ ಬಳಸಬಹುದು. ನಂತರ ಆ ತಿರುಳು ಅಥವಾ ಒಣನೆಲ್ಲಿಕಾಯಿಯ ಪುಡಿಯನ್ನು ನೂರು ಗ್ರಾಂ ತುಪ್ಪದಲ್ಲಿ ಬಂಗಾರದ ಬಣ್ಣ ಬರುವವರೆಗೆ ಹುರಿದು ಬದಿಗಿಡಬೇಕು. ನೆಲ್ಲಿಕಾಯಿ ಬೇಯಿಸಿದ ನೀರಿಗೆ 1 ಕೆಜಿ 750 ಗ್ರಾಂ ಜೋನಿಬೆಲ್ಲ ಹಾಕಿ ಸರಿಯಾದ ಪಾಕ ಬರುವವರೆಗೆ ಕಾಯಿಸಬೇಕು.
ಪಾಕ ಬರುತ್ತಿದ್ದಂತೆ ಹುರಿದಿಟ್ಟ ನೆಲ್ಲಿಕಾಯಿ, ಮೊದಲೇ ಪುಡಿ ಮಾಡಿಟ್ಟುಕೊಂಡ ಹಿಪ್ಪಲಿ 15 ಗ್ರಾಂ, ಏಲಕ್ಕಿ 7.5 ಗ್ರಾಂ, ದಾಲ್ಚಿನ್ನಿ ಎಲೆ 7.5 ಗ್ರಾಂ, ಚಕ್ಕೆ 7.5 ಗ್ರಾಂ ಹಾಕಿ ಬೆಂಕಿಯಿಂದ ಕೆಳಗಿಳಿಸಬೇಕು. ತಣ್ಣಗಾದ ನಂತರ 150 ಗ್ರಾಂ ಜೇನುತುಪ್ಪ ಹಾಕಿಟ್ಟುಕೊಂಡರೆ ಮಿನಿ ಚ್ಯವನಪ್ರಾಶ್ ಸೇವನೆಗೆ ಸಿದ್ಧ. ವಯಸ್ಕರು ನಿತ್ಯ 15ರಿಂದ 20 ಗ್ರಾಂ, ಚಿಕ್ಕ ಮಕ್ಕಳು 5ರಿಂದ 10 ಗ್ರಾಂ ಸೇವಿಸಿದರೆ ಒಬ್ಬರಿಗೆ ಸುಮಾರು ಒಂದು ತಿಂಗಳಿಗೆ ಈ ಚ್ಯವನಪ್ರಾಶ್ ಸಾಕಾಗುತ್ತದೆ.