ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸುವುದು ?
ಪ್ರತಿ ವರ್ಷ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ವರ್ಷ ಕೋರೋನಾ ಮಹಾಮಾರಿಯಿಂದ ಬಂದೆರಗಿರುವ ಆಪತ್ಕಾಲದಲ್ಲಿ ಒಟ್ಟಿಗೆ ಸೇರುವುದು ಸಮಂಜಸವಲ್ಲ. ಆದುದರಿಂದ ನಾವೆಲ್ಲರೂ ನಮ್ಮ ಮನೆಯಲ್ಲೇ ಇದ್ದು ಭಕ್ತಿ ಭಾವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸಬಹುದು ಎಂದು ನೋಡೋಣ.
- ಶ್ರೀಕೃಷ್ಣನಿಗೆ ಯಾವ ಸಮಯದಲ್ಲಿ ಪೂಜೆ ಮಾಡಬೇಡು ?
ಶ್ರೀಕೃಷ್ಣನ ಜನ್ಮವು ಮಧ್ಯರಾತ್ರಿ 12 ಗಂಟೆಗೆ ಆಯಿತು. ಆದುದರಿಂದ ಅದಕ್ಕಿಂತ ಮೊದಲೇ ಪೂಜೆಯ ತಯಾರಿಯನ್ನು ಮಾಡಿಟ್ಟುಕೊಳ್ಳಿ. ರಾತ್ರಿ 12 ಗಂಟೆಗೆ ಸರಿಯಾಗಿ ಶ್ರೀಕೃಷ್ಣನಿಗೆ ಜೋಗುಳವನ್ನು ಹಾಡಿ. - ಶ್ರೀಕೃಷ್ಣನಿಗೆ ಪೂಜೆಯನ್ನು ಹೇಗೆ ಸಲ್ಲಿಸುವುದು ?
ಶ್ರೀಕೃಷ್ಣನಿಗೆ ಜೋಗುಳ ಹಾಡಿದ ನಂತರ ಶ್ರೀಕೃಷ್ಣನ ವಿಗ್ರಹ ಅಥವಾ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಬೇಕು.
ಷೋಡಶೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನಿಗೆ ‘ಷೋಡಶೋಪಚಾರ ಪೂಜೆಯನ್ನು ಮಾಡಲು ಸಾಧ್ಯವಿದೆಯೋ, ಅವರು ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
ಪಂಚೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನಿಗೆ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿಲ್ಲ, ಅಂತಹವರು ‘ಪಂಚೋಪಚಾರ ಪೂಜೆಯನ್ನು ಮಾಡಬೇಕು. ಇದರಲ್ಲಿ ಗಂಧ, ಅರಿಶಿಣ-ಕುಂಕುಮ, ಹೂವು, ಧೂಪ, ದೀಪ ಮತ್ತು ನೈವೇದ್ಯಗಳನ್ನು ಈ ಕ್ರಮದಿಂದ ಅರ್ಪಿಸುವಾಗ ‘ಸಪರಿವಾರಾಯ ಶ್ರೀಕೃಷ್ಣಾಯ ನಮಃ |’ ಎಂಬ ಮಂತ್ರವನ್ನು ಉಚ್ಚರಿಸಬೇಕು.
ಶ್ರೀಕೃಷ್ಣನಿಗೆ ಮೊಸರವಲಕ್ಕಿ ಮತ್ತು ಬೆಣ್ಣೆಯ ನೈವೇದ್ಯವನ್ನು ಅರ್ಪಿಸಿ ನಂತರ ಆರತಿಯನ್ನು ಬೆಳಗಬೇಕು. - ಶ್ರೀಕೃಷ್ಣನ ಮಾನಸ ಪೂಜೆ
ಕಾರಣಾಂತರಗಳಿಂದ ಶ್ರೀಕೃಷ್ಣನಿಗೆ ಪ್ರತ್ಯಕ್ಷವಾಗಿ ಪೂಜೆ ಸಲ್ಲಿಸಲು ಆಗದಿದ್ದರೆ ಮಾನಸ ಪೂಜೆಯನ್ನು ಕೂಡ ಮಾಡಬಹುದು. ಇದರಲ್ಲಿ ಮನಸ್ಸಿನಲ್ಲಿಯೇ ಸಾಕ್ಷಾತ್ ದೇವರು ನಮ್ಮ ಮುಂದಿದ್ದಾರೆ ಎಂದು ಭಾವಿಸಿ ಪ್ರತ್ಯಕ್ಷ ಪೂಜೆಯಲ್ಲಿ ಮಾಡುವ ಪ್ರತಿಯೊಂದು ಉಪಚಾರವನ್ನು ಮಾಡಬಹುದು. ಇದಕ್ಕೆ ಯಾವುದೇ ಬಂಧನಗಳಿರುವುದಿಲ್ಲ. - ಪೂಜೆಯಾದ ನಂತರ ನಾಮಜಪ ಮಾಡಿ !
ಶ್ರೀಕೃಷ್ಣನ ಜನ್ಮಾಷ್ಟಮಿಯ ಪೂಜೆ ಆದ ನಂತರ ಮನೆಯವರೆಲ್ಲರೂ ಸೇರಿ ‘ಓಂ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಓಂ |’ ನಾಮ ಜಪಿಸಿ. - ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡುವುದು
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವ ‘ನ ಮೇ ಭಕ್ತಃ ಪ್ರಣಶ್ಯತಿ |’ (ನನ್ನ ಭಕ್ತರ ನಾಶವಾಗುವುದಿಲ್ಲ) ವಾಕ್ಯವನ್ನು ಸ್ಮರಿಸಿ, ನಮ್ಮಲ್ಲಿ ‘ಅರ್ಜುನನಂತಹ ಅಪರಿಮಿತ ಭಕ್ತಿಯು ನಿರ್ಮಾಣವಾಗಲಿ’ ಎಂದು ಆರ್ತತೆಯಿಂದ ಪ್ರಾರ್ಥನೆಯನ್ನು ಮಾಡಬೇಕು.
ಮಾಹಿತಿ: ಸನಾತನ ಸಂಸ್ಥೆ