ಸುಪ್ರೀಂ ಜಡ್ಜ್​ಗಳು ಎಷ್ಟು ಶ್ರೀಮಂತರು? ಆಸ್ತಿ ಬಹಿರಂಗಪಡಿಸಿದ 21 ನ್ಯಾಯಮೂರ್ತಿಗಳು

ವಿಜಯವಾಣಿ (5)
Published on

ಐತಿಹಾಸಿಕ ಕ್ರಮವೊಂದರಲ್ಲಿ ಸುಪ್ರೀಂ ಕೋರ್ಟ್​ನ 33 ನ್ಯಾಯಮೂರ್ತಿಗಳ ಪೈಕಿ 21 ನ್ಯಾಯಮೂರ್ತಿಗಳು ಸೋಮವಾರ ತಮ್ಮ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಬಹಿರಂಗಪಡಿಸಿದ್ದಾರೆ. ಸುಪ್ರೀಂ ಕೋರ್ಟ್​ನ ವೆಬ್​ಸೈಟ್​ನಲ್ಲಿ ಎಲ್ಲ ವಿವರಗಳನ್ನು ಪ್ರಕಟಿಸಲಾಗಿದೆ. ಷೇರು, ಮ್ಯೂಚುವಲ್ ಫಂಡ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮುಂತಾದವುಗಳಲ್ಲಿ ಯಾರು ಎಷ್ಟು ಹಣ ಹೂಡಿದ್ದಾರೆ, ಯಾರ ಬಳಿ ಎಷ್ಟು ಆಸ್ತಿ ಇದೆ, ಯಾವ್ಯಾವ ಕಾರುಗಳಿವೆ, ಚಿನ್ನ-ಬೆಳ್ಳಿ ಎಷ್ಟಿದೆ ಮುಂತಾದ ಎಲ್ಲ ಮಾಹಿತಿಯೂ ಈಗ ಸಾರ್ವಜನಿಕರಿಗೆ ಲಭ್ಯ. ಆ ಪೈಕಿ ಆಯ್ದ ವಿವರ ಇಲ್ಲಿದೆ.

1. ನ್ಯಾ. ಸಂಜೀವ್ ಖನ್ನಾ ಸಿಜೆಐ

ಇನ್ನು ಕೆಲ ದಿನಗಳಲ್ಲಿ ನಿವೃತ್ತರಾಗಲಿರುವ ನ್ಯಾ. ಸಂಜೀವ್ ಖನ್ನಾ ಅವರ ಹೂಡಿಕೆ ಒಟ್ಟು 3.4 ಕೋಟಿ ರೂ.ನಷ್ಟಿದೆ. ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುದರ ವಿವರ ಇಲ್ಲಿದೆ. ನ್ಯಾ. ಸಂಜೀವ್ ಖನ್ನಾ ಅವರು ದಕ್ಷಿಣ ದೆಹಲಿಯಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ ಅಪಾರ್ಟ್ ಮೆಂಟ್​ನಲ್ಲಿ 3 ಬೆಡ್​ರೂಮ್ಳ ಫ್ಲ್ಯಾಟ್ ಹೊಂದಿದ್ದಾರೆ. ಕಾಮನ್​ವೆಲ್ತ್ ಗೇಮ್ಸ್​ ವಿಲೇಜ್​ನಲ್ಲಿ 2,446 ಚದರಡಿಯ 4 ಬೆಡ್​ರೂಮ್ಳ ಫ್ಲ್ಯಾಟ್ ಕೂಡ ಇದೆ. 250 ಗ್ರಾಂ ಚಿನ್ನ 2 ಕೆಜಿ ಬೆಳ್ಳಿ (ಬಹುತೇಕ ಪಿತ್ರಾರ್ಜಿತ ಮತ್ತು ಸಮಾರಂಭಗಳಲ್ಲಿ ಉಡುಗೊರೆಯಾಗಿ ಬಂದದ್ದು) ಆಭರಣಗಳು ಇವೆ. ಒಂದು ಮಾರುತಿ ಸ್ವಿಫ್ಟ್ ಕಾರು ಹೊಂದಿದ್ದಾರೆ.

  • ಫಿಕ್ಸ್​ಡ್ ಡೆಪಾಸಿಟ್ ಮತ್ತು ಬ್ಯಾಂಕ್ ಖಾತೆಗಳಲ್ಲಿ 55,75,000 ರೂ. (ಅಂದಾಜು)
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ 1,06,86,000 ರೂ. (ಅಂದಾಜು) (ಖಾತೆ ತೆರೆದಿದ್ದು 1989ರಲ್ಲಿ)
  • ಜಿಪಿಎಫ್ (ಜನರಲ್ ಪ್ರಾವಿಡೆಂಟ್ ಫಂಡ್) 1,77,89,000 (ಅಂದಾಜು)
  • ಎಲ್​ಐಸಿ ಮನಿ ಬ್ಯಾಕ್ ಪಾಲಿಸಿ ವಾರ್ಷಿಕ ಪ್ರೀಮಿಯಂ 29,625 ರೂ.
  • ಷೇರುಗಳು 14,000 ರೂ.

ನ್ಯಾ. ಭೂಷಣ್ ರಾಮಕೃಷ್ಣ ಗವಾಯಿ

ಇವರು ಸುಪ್ರೀಂ ಕೋರ್ಟ್​ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ. ಇದೇ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಬ್ಯಾಂಕ್​ನಲ್ಲಿ 19.63 ಲಕ್ಷ ರೂ. ಇದೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಪಿತ್ರಾರ್ಜಿತ ಮನೆ ಇದೆ. ಮುಂಬೈನ ಬಾಂದ್ರಾ ಮತ್ತು ದೆಹಲಿಯ ಡಿಫೆನ್ಸ್ ಕಾಲನಿಯ ಅಪಾರ್ಟ್​ವೆುಂಟ್​ಗಳಲ್ಲಿ ಮನೆಗಳಿವೆ. ಅಮರಾವತಿ ಮತ್ತು ನಾಗಪುರದಲ್ಲಿ ಕೃಷಿ ಜಮೀನಿದೆ. ಅವರ ಒಟ್ಟು ಹೂಡಿಕೆ 42 ಲಕ್ಷ ರೂ.; ಒಟ್ಟು ಚರಾಸ್ತಿ ಮೌಲ್ಯ 80 ಲಕ್ಷ ರೂ. ಅವರ ಪತ್ನಿ ಬಳಿ 29.70 ಲಕ್ಷ ರೂ. ಮೌಲ್ಯದ ಆಭರಣಗಳಿವೆ. ನಗದು 61 ಸಾವಿರ ರೂ. ಇದೆ.

ಹೂಡಿಕೆ

  • ನ್ಯಾಯಸಾಗರ ಸಹಕಾರ ಸೊಸೈಟಿ, ಮುಂಬೈ 1000 ರೂ.
  • ಇತರ 31,315 ರೂ.
  • ಪಿಪಿಎಫ್ 6,59,692 ರೂ.
  • ಜಿಪಿಎಫ್ 35,86,736 ರೂ.

ಚರಾಸ್ತಿ

  • ಚಿನ್ನದ ಆಭರಣಗಳು 5,25,859 ರೂ.
  • ನಗದು 61,320 ರೂ.
  • ಬ್ಯಾಂಕ್ ಖಾತೆಯಲ್ಲಿ 19,63,584 ರೂ.
  • ಇತರ ಅಡ್ವಾನ್ಸ್ 54,86,841 ರೂ.

ಹೊಣೆಗಾರಿಕೆ

  • ಮುಂಬೈ ಫ್ಲ್ಯಾಟ್ ಠೇವಣಿ 7,00,000 ರೂ.
  • ಮುಂಗಡ ಬಾಡಿಗೆ (ದೆಹಲಿ ಫ್ಲ್ಯಾಟ್) 17,32,500 ರೂ.
  • ಭೂಷಣ್ ಗವಾಯಿ (ಎಚ್​ಯುುಎಫ್) 1,07,50,837 ರೂ.

ನ್ಯಾ. ಅಭಯ್ ಎಸ್. ಓಕ

ಮೇ 24ರಂದು ನಿವೃತ್ತರಾಗಲಿರುವ ನ್ಯಾ. ಅಭಯ್ ಎಸ್. ಓಕ ಮಹಾರಾಷ್ಟ್ರದ ಥಾಣೆಯಲ್ಲಿ ಫ್ಲ್ಯಾಟ್ ಮತ್ತು ಕಟ್ಟಡವೊಂದರ 3ನೇ ಅಂತಸ್ತಿನಲ್ಲಿ ಸ್ವಲ್ಪ ಭಾಗದ ಒಡೆತನ ಹೊಂದಿದ್ದಾರೆ. ಥಾಣೆಯ ಕೃಷಿ ಜಮೀನೊಂದರಲ್ಲಿ ಭಾಗ ಇದೆ. 21.76 ಲಕ್ಷ ರೂ. ಫಿಕ್ಸ್​ಡ್ ಠೇವಣಿ ಹೊಂದಿದ್ದಾರೆ. 9.10 ಲಕ್ಷ ರೂ. ಉಳಿತಾಯ ಇದೆ. ಅವರ ಒಟ್ಟು ಹೂಡಿಕೆ 1.3 ಕೋಟಿ ರೂ.ನಷ್ಟಿದೆ.

ಹೂಡಿಕೆ

  • ಪಿಪಿಎಫ್ 92,35,645 ರೂ.
  • ಫಿಕ್ಸ್​ಡ್ ಡೆಪಾಸಿಟ್ 21,76,000 ರೂ.
  • ಉಳಿತಾಯ ಖಾತೆ 9,10,000 ರೂ.
  • ಮ್ಯೂಚುವಲ್ ಫಂಡ್ಸ್ 8,20,000 ರೂ.
  • ಕಂಪನಿಗಳಲ್ಲಿ ಷೇರುಗಳು 4,75,000 ರೂ.
  • ಸಹಕಾರ ಬ್ಯಾಂಕ್ ಷೇರುಗಳು 1,02,400 ರೂ.
  • ಎಲ್​ಐಸಿ ಪಾಲಿಸಿ 1,00,000

ಚರಾಸ್ತಿ

  • ಚಿನ್ನದ ಆಭರಣಗಳು 200 ಗ್ರಾಂ
  • ಕಾರು ಮಾರುತಿ ಬಲೆನೊ

ಹೊಣೆಗಾರಿಕೆ

  • ಕಾರ್ ಲೋನ್ 5,10,661 ರೂ.

ನ್ಯಾ. ವಿಶ್ವನಾಥನ್ ಆಸ್ತಿ 120 ಕೋಟಿ ರೂ.

ನ್ಯಾ. ಕೆ.ವಿ. ವಿಶ್ವನಾಥನ್ ದೆಹಲಿಯಲ್ಲಿ 2 ಬಿಲ್ಡರ್ ಫೊ್ಲೕರ್​ಗಳ ಮಾಲೀಕತ್ವ ಹೊಂದಿದ್ದಾರೆ. ಈ ಎಲ್ಲವೂ ತಮಿಳುನಾಡಿನ ಕೊಯಮತ್ತೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ 2019ರಲ್ಲಿ ಅವರು ಅಪಾರ್ಟ್ ಮೆಂಟ್ ಒಂದನ್ನು ಖರೀದಿಸಿದ್ದಾರೆ. ಪಿತ್ರಾರ್ಜಿತವಾಗಿ ಎಸ್ಟೇಟ್​ನಲ್ಲಿ ಅವರಿಗೆ ಶೇ. 50ರಷ್ಟು ಪಾಲು ಬಂದಿದೆ. ಅವರ ಹೂಡಿಕೆ 120 ಕೋಟಿ ರೂ.ನಷ್ಟಿದೆ. 2010-11ರಿಂದ 2024-25ರವರೆಗಿನ ಅವಧಿಯಲ್ಲಿ ಅವರು 91.47 ಕೋಟಿ ರೂ. ಆದಾಯ ತೆರಿಗೆ ಕಟ್ಟಿದ್ದಾರೆ.

ವಿವರ ಸಲ್ಲಿಸದವರು

1. ಜೆ.ಕೆ. ಮಾಹೇಶ್ವರಿ 2. ಬಿ.ವಿ. ನಾಗರತ್ನ 3. ದೀಪಂಕರ್ ದತ್ತಾ 4. ಅಹ್ಸನುದ್ದಿನ್ ಅಮಾನುಲ್ಲಾ 5. ಮನೋಜ್ ಮಿಶ್ರಾ 6. ಅರವಿಂದ್ ಕುಮಾರ್ 7. ಪ್ರಶಾಂತ್ ಕುಮಾರ್ ಮಿಶ್ರಾ 8. ಸತೀಶ್​ಚಂದ್ರ ಶಮಾ 9. ಪ್ರಸನ್ನ ಬಾಲಚಂದ್ರ ವರಲೆ 10. ಎನ್. ಕೋಟೀಶ್ವರ್ ಸಿಂಗ್ 11. ಆರ್. ಮಹಾದೇವನ್ 12. ಜಯಮಾಲಾ ಬಾಗ್ಚಿ.

ಏಕೆ ಈ ಕ್ರಮ?

ಸಾರ್ವಜನಿಕ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ನ್ಯಾಯಮೂರ್ತಿಗಳ ವೈಯಕ್ತಿಕ ಆಸ್ತಿಪಾಸ್ತಿಗಳ ವಿವರ ಬಹಿರಂಗಪಡಿಸುವ ತೀರ್ಮಾನವನ್ನು ಸುಪ್ರೀಂ ಕೋರ್ಟ್​ನ ಪೂರ್ಣ ಪೀಠ ಕೈಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net