ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ಗೆ ಜೈಲಿನಲ್ಲಿ ರಾಜ್ಯಾತಿಥ್ಯ ನೀಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋಟೋ ಕೂಡ ವೈರಲ್ ಆಗಿದ್ದು, ಜೈಲು ಅಧಿಕಾರಿಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಒಂದು ಕೈಯಲ್ಲಿ ಕಾಫಿ ಕಪ್ ಹಾಗೂ ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು, ಕುರ್ಚಿಯ ಮೇಲೆ ಆರಾಮಾಗಿ ಕುಳಿತು ರೌಡಿ ವಿಲ್ಸನ್ ಗಾರ್ಡನ್ ಜತೆ ದರ್ಶನ್ ಮಾತನಾಡುತ್ತಿರುವ ದೃಶ್ಯ ವೈರಲ್ ಆಗಿರುವ ಫೋಟೋದಲ್ಲಿದೆ. ಇದರ ಬೆನ್ನಲ್ಲೇ ದರ್ಶನ್, ರೌಡಿಶೀಟರ್ ಮಗನ ಜತೆ ಜೈಲಿನಿಂದಲೇ ದರ್ಶನ್ ವಿಡಿಯೋ ಕಾಲ್ ಮೂಲಕ ಮಾತನಾಡಿರುವ ವಿಡಿಯೋ ಸಹ ಲೀಕ್ ಆಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ಅಷ್ಟಕ್ಕೂ ನಟ ದರ್ಶನ್ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದು ಯಾರ ಜತೆ ಎಂಬ ಚರ್ಚೆ ನಡೆಯುತ್ತಿದೆ. ಮೂಲಗಳ ಪ್ರಕಾರ ರೌಡಿಶೀಟರ್ ಮಗನ ಜೊತೆ ದರ್ಶನ್ ಮಾತನಾಡಿದ್ದಾರೆ ಎನ್ನಲಾಗಿದೆ. ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ ಅಲಿಯಾಸ್ ಜನಾರ್ದನ್ ಮಗ ಸತ್ಯನ ಜೊತೆ ಮಾತಾನಾಡಿರುವುದಾಗಿ ತಿಳಿದುಬಂದಿದೆ. ದರ್ಶನ್ಗೆ ರೌಡಿಗಳ ಜತೆ ಲಿಂಕ್ ಇದೆ ಎಂಬ ಆರೋಪ ಆಗಾಗ ಕೇಳಿಬರುತ್ತಿತ್ತು. ಇದೀಗ ಫೋಟೋ ಮತ್ತು ವಿಡಿಯೋ ವೈರಲ್ ಆಗಿರುವುದನ್ನು ನೋಡಿದರೆ ನಿಜ ಎನಿಸುತ್ತಿದೆ. ರೌಡಿಶೀಟರ್ ಮಗನಿಗೂ ನಟ ದರ್ಶನ್ಗೂ ಏನು ಸಂಬಂಧ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಅಂದಹಾಗೆ ರೌಡಿಶೀಟರ್ ಮಾರ್ಕೆಟ್ ಧರ್ಮ ಸದ್ಯ ಜೈಲಿನಲ್ಲಿದ್ದಾನೆ. ಜಾನಿ ಮಗ ಸತ್ಯ ಕೂಡ ಇತ್ತೀಚೆಗೆ ಜೈಲಿಗೆ ಹೋಗಿ ಬಂದಿದ್ದ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಉಲ್ಟಾ ಮಚ್ಚಲ್ಲಿ ಕೆ ಎಲ್ ಇ ಕಾಲೇಜ್ ವಿದ್ಯಾರ್ಥಿಗಳಿಗೆ ಹೊಡೆದ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗಿದ್ದಾನೆ.
ಮಾರ್ಕೆಟ್ ಧರ್ಮ ಸತ್ಯನಿಗೆ ವಿಡಿಯೋ ಕರೆ ಮಾಡಿದ್ದ. ದರ್ಶನ್ ನಮ್ಮ ಪಕ್ಕದ ಸೆಲ್ನಲ್ಲೇ ಇದಾರೆ ಎಂದು ಧರ್ಮ ಹೇಳಿದ್ದಾನೆ. ಬಳಿಕ ತೋರಿಸ್ತಿನಿ ಅಂತ ದರ್ಶನ್ ಕೈಯಲ್ಲಿ ಮಾತನಾಡಿಸಿದ್ದಾನೆ. ಈ ವೇಳೆ ವಿಡಿಯೋ ರೆಕಾರ್ಡ್ ಮಾಡಿಕೊಂಡ ಸತ್ಯ, ಅದನ್ನು ಸ್ಟೇಟಸ್ಗೆ ಹಾಗಿ ಬಿಲ್ಡಪ್ ಕೊಟ್ಟುಕೊಂಡಿದ್ದಾನೆ. ಅಲ್ಲದೆ, ಎಲ್ಲರಿಗೂ ತೋರಿಸಿದ್ದಾನೆ. ಇದೀಗ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದರಿಂದ ದರ್ಶನ್ಗೂ ಸಂಕಷ್ಟ ಎದುರಾಗಲಿದೆ.
ದರ್ಶನ್ ಜೈಲು ಸೇರಿ ಎರಡು ತಿಂಗಳಿಗೂ ಹೆಚ್ಚು ಸಮಯ ಆಗಿದೆ. ಆಗಿನಿಂದಲೂ ಜೈಲಿನಲ್ಲಿ ದರ್ಶನ್ಗೆ ಎಲ್ಲವೂ ಆರಾಮಾಗಿ ಸಿಗುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಇದೀಗ ಫೋಟೋ ಹೊರಬಂದ ಬಳಿಕ ಆರೋಪ ನಿಜವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಷ್ಟಕ್ಕೂ ಜೈಲಿನ ಒಳಗಿರುವ ದರ್ಶನ್ ಫೋಟೋ ಲೀಕ್ ಆಗಿದ್ದು ಹೇಗೆ?
ಜೈಲು ನಿಯಮಗಳ ಪ್ರಕಾರ ಜೈಲಿನಲ್ಲಿ ಸಿಗರೇಟ್ ಅಥವಾ ಯಾವುದೇ ಮಾದಕ ವಸ್ತುಗಳಿಗಾಗಲಿ ಅವಕಾಶವೇ ಇರುವುದಿಲ್ಲ. ಯಾರಾದರೂ ತುಂಬಾ ಅಡಿಕ್ಟ್ ಆಗಿದ್ದರೆ, ಅಂದರೆ ಸಿಗದೇ ಹೋದರೆ ಸತ್ತು ಹೋಗುತ್ತೇನೆ ಅನ್ನುವಷ್ಟು ಅಡಿಕ್ಟ್ ಆಗಿದ್ದರೆ ವೈದ್ಯರ ಸಲಹೆ ಮೇರೆಗೆ ಸಿಗರೇಟ್ ಕೊಡಲಾಗುತ್ತದೆ. ಇನ್ನು ದರ್ಶನ್ಗೆ ಸಿಗರೇಟ್ ಸಿಕ್ಕಿದ್ದಲ್ಲದೆ, ಕುರ್ಚಿಯ ಮೇಲೆ ರೌಡಿಗಳ ಕುಳಿತು ಆರಾಮಾಗಿ ಟೀ ಅಥವಾ ಕಾಫಿ ಸವಿಯುತ್ತಿರುವುದುನ್ನು ಕಾಣಬಹುದು. ದರ್ಶನ್ ಮುಖದಲ್ಲಿ ಯಾವುದೇ ಪಾಪಪ್ರಜ್ಞೆಯೂ ಕಾಣುತ್ತಿಲ್ಲ.
ಹಣ ಕೊಟ್ಟರೆ ಜೈಲಿನಲ್ಲಿ ಎಲ್ಲವೂ ಸಿಗುತ್ತದೆ ಎಂಬ ಗಂಭೀರ ಆರೋಪ ಬಹಳ ಹಿಂದಿನಿಂದಲೂ ಕೇಳಿಬರುತ್ತಿದೆ. ಮೊಬೈಲ್, ಸಿಗರೇಟ್, ಆಲ್ಕೋಹಾಲ್ ಹಾಗೂ ಮಾದಕ ವಸ್ತು ಎಲ್ಲವೂ ಕೂಡ ಕೈದಿಗಳಿಗೆ ಸಿಗುತ್ತದೆ. ಹಣವೊಂದಿದ್ರೆ ಸಾಕು ಜೈಲೊಳಗೆ ವಿಐಪಿ ಟ್ರೀಟ್ಮೆಂಟ್ ಸಿಗುತ್ತದೆ. ಇದೀಗ ದರ್ಶನ್ ಫೋಟೋ ವೈರಲ್ ಆಗಿರುವುದು ಇದಕ್ಕೆ ತಾಜಾ ಸಾಕ್ಷಿಯಾಗಿದೆ. ಈ ಹಿಂದೆ ಜಯಲಲಿತಾ ಆಪ್ತೆ ಶಶಿಕಲಾಗೂ ರಾಜ್ಯಾತಿಥ್ಯ ನೀಡಿದ ಆರೋಪ ಕೇಳಿಬಂದಿತ್ತು. ಇಂತಹ ಪ್ರಕರಣಗಳಲ್ಲಿ ಜೈಲು ಅಧಿಕಾರಿಗಳೇ ಶಾಮೀಲಾಗಿರುತ್ತಾರೆ ಎಂಬ ಆರೋಪವೂ ಇದೆ. ಅಧಿಕಾರಿಗಳ ಸಹಕಾರದಿಂದಲೇ ಜೈಲಿನ ಒಳಗೆ ದರ್ಶನ್ ಆರಾಮಾಗಿದ್ದಾರೆ ಎನ್ನಲಾಗುತ್ತಿದೆ.
ಫೋಟೋ ಲೀಕ್ ಆಗಿದ್ದು ಹೇಗೆ?
ಇನ್ನು ಫೋಟೋ ಹೇಗೆ ಸೋರಿಕೆ ಆಯಿತು ಅನ್ನೋದನ್ನು ನೋಡುವುದಾದರೆ, ವೇಲು ಎಂಬ ಕೈದಿ ಈ ಫೋಟೋವನ್ನು ಜೈಲಿನಿಂದ ತೆಗೆದು, ತನ್ನ ಪತ್ನಿಗೆ ಕಳುಹಿಸಿದ್ದ. ಆ ಬಳಿಕ ವೈರಲ್ ಆಗಿದೆ ಎಂದು ಮಾಧ್ಯಮವೊಂದು ತಿಳಿಸಿದೆ. ಒಬ್ಬ ಕೊಲೆ ಆರೋಪಿಗೆ ಇಷ್ಟೊಂದು ರಾಜ ಮರ್ಯಾದೆ ನೀಡುತ್ತಿರುವುದಕ್ಕೆ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡೆವು ಎಂದು ಟ್ವೀಟ್ ಮೂಲಕ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಏನಿದು ಪ್ರಕರಣ?
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡ ಇದೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್ ಬ್ಲಾಕ್ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್ಗೆ ಹೇಳಿದ್ದರು. ಈ ವಿಚಾರ ದರ್ಶನ್ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.
ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.
ಜೈಲಿನಲ್ಲಿ ಡಿ ಗ್ಯಾಂಗ್ಗೆ ರಾಜಾತಿಥ್ಯ? ಫೋಟೋ ಆಯ್ತು.. ಈಗ ವಿಡಿಯೋ ಕಾಲ್ ‘ದರ್ಶನ’!
ನಟೋರಿಯಸ್ ರೌಡಿಗಳ ಜತೆ ದರ್ಶನ್! ಪರಪ್ಪನ ಅಗ್ರಹಾರ ಜೈಲಿನಿಂದ ದಾಸನ ಫೋಟೋ ಲೀಕ್ ಆಗಿದ್ದು ಹೇಗೆ?