ಉಪ್ಪುನೀರು ನುಗ್ಗಿ ಕೃತಕ ನೆರೆ

nere
Published on

ವಿಜಯವಾಣಿ ಸುದ್ದಿಜಾಲ ಕೋಟ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಯಕ್ಷಿಮಠ, ಪಾಂಡೇಶ್ವರ ಗ್ರಾಮ ಪಂಚಾಯಿತಿಯ ಸೂಲ್ಕುದ್ರು, ಕೋಡಿ ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಹಠಾತ್ ಉಪ್ಪು ನೀರಿನಿಂದ ಕೃತಕ ನೆರೆ ಉಂಟಾಗಿದ್ದು, ಕೃಷಿ ಭೂಮಿ ಸಹಿತ ಮನೆಗಳು ಜಲಾವೃತಗೊಂಡಿವೆ. ಇದರಿಂದ ಜನರು ನೆಲೆ ಕಳೆದುಕೊಂಡಿದ್ದಾರೆ. ಸುಮಾರು ನಲವತ್ತುಕ್ಕೂ ಅಧಿಕ ಕೃಷಿ ಭೂಮಿಯಲ್ಲಿ ಉದ್ದು, ಅವರೆ ಸಹಿತ ಹಲವು ಬೆಳೆ ಬೆಳೆಯಲಾಗುತ್ತಿದ್ದು, ಪದೇಪದೇ ಉಂಟಾಗುವ ಉಪ್ಪುನೀರಿನ ಕೃತಕ ನೆರೆಗೆ ಕೃಷಿ ಹಾನಿ ಹಾಗೂ ಭೂಮಿ ಬರಡಾಗುತ್ತಿದೆ. ಇನ್ನೂ ಕೆಲವೆಡೆ ತರಕಾರಿಗಳನ್ನು ಪ್ರಧಾನ ಬೆಳೆಯಾಗಿ ಬೆಳೆಯಲಾಗುತ್ತಿದ್ದು, ಉಪ್ಪುನೀರಿನ ನೆರೆಯಿಂದ ಅವುಗಳೂ ನಷ್ಟವಾಗುವ ಭೀತಿ ಎದುರಾಗಿದೆ. ಯಕ್ಷಿಮಠ ಪರಿಸರದಲ್ಲಿ ಹೊಳೆ ಸಾಲುಗಳಿಗೆ ತಡೆ ದಂಡೆ ನಿರ್ಮಿಸಿದರೆ ಉಪ್ಪು ನೀರಿನ ನೆರೆ ಸಮಸ್ಯೆಗೆ ಮುಕ್ತಿ ನೀಡಬಹುದು. ಈ ಕುರಿತು ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಯಕ್ಷಿಮಠದಲ್ಲಿ ನಲವತ್ತರಿಂದ ಐವತ್ತು ಮನೆಗಳಿಗೆ ಹಾಗೂ ನಲವತ್ತು ಎಕರೆ ಕೃಷಿ ಭೂಮಿ ಉಪ್ಪು ನೀರು ನುಗ್ಗಿ ಹಾನಿಗಳಾಗುತ್ತಲೇ ಇದ್ದರೂ ಸಂಬಂಧಿತರು ಯಾರೂ ಗಮನಹರಿಸುತ್ತಿಲ್ಲ. ಕೃಷಿ ಹಾನಿಯಿಂದ ಕೃಷಿಕರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆಗಳನ್ನು ಕೂಡಲೇ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಕೃತಕ ನೆರೆ ಉಂಟಾಗಲು ಕಾರಣ?

ಪಾಂಡೇಶ್ವರ ಹಾಗೂ ಬೆಣ್ಣೆಕುದ್ರಿವಿಗೆ ಅಡ್ಡಲಾಗಿ ವೆಂಟೆಡ್ ಡ್ಯಾಂ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿ ಭಾಗದ ಶಿಥಿಲಾವಸ್ಥೆಗೊಂಡ ಸೇತುವೆ ಪಕ್ಕ ಹೊಸ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಹೊಳೆಯ ನೀರಿನ ಏರಿಳಿತಕ್ಕೆ ತಡೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಆರಂಭವಾಗಿದ್ದು, ನೀರಿನ ಏರಿಳಿತ ಆದಾಗ ಹಠಾತ್ತನೆ ಉಪ್ಪು ನೀರು ಸ್ಥಳೀಯ ಕೃಷಿ ಭೂಮಿ, ಮನೆಗಳಿಗೆ ನುಗ್ಗುತ್ತಿದೆ.

* ಪ್ರಕೃತಿ ವಿರುದ್ಧ ಕಾಮಗಾರಿಯಿಂದ ಪದೇಪದೆ ಹಠಾತ್ ನೆರೆ

* ನೂರಾರು ಬಾರಿ ಮನವಿ ಮಾಡಿದರೂ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷೃ

* ಕೃಷಿ ಹಾನಿ, ಮನೆಗಳು ಜಲಾವೃತ್ತ

* ಸ್ಥಳೀಯರಿಂದ ಪ್ರತಿಭಟನೆಯ ಎಚ್ಚರಿಕೆ

ಪ್ರತಿವರ್ಷ ಇದೇ ಗೋಳಾಗಿದೆ. ಒಂದೊಂದು ವ್ಯಾಪ್ತಿಯಲ್ಲಿ ಸೇತುವೆ, ಡ್ಯಾಂ ನಿರ್ಮಾಣದಿಂದ ಹೊಳೆಗಳ ನೀರಿನ ಹರಿವಿನಲ್ಲಿ ಏರಿಳಿತಗಳಾಗುತ್ತಿದೆ. ಇದರಿಂದ ಕೃತಕ ನೆರೆ ಸೃಷ್ಟಿಯಾಗುತ್ತಿವೆ. ಹೊಳೆಗೆ ತಡೆ ನಿರ್ಮಿಸಲು ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ, ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನ ಶೂನ್ಯ. ಶೀಘ್ರವೇ ಈ ಸಮಸ್ಯೆ ಬಗೆಹರಿಸಿ ಕೃಷಿಕರ ಹಾಗೂ ಗ್ರಾಮಸ್ಥರ ನೋವಿಗೆ ಸ್ಪಂದಿಸಬೇಕು -ರವಿ ಯಕ್ಷಿಮಠ ಸ್ಥಳೀಯ ನಿವಾಸಿ ಕೋಡಿತಲೆ ಹಾಗೂ ಹೊಸಬೇಂಗ್ರೆ ಸಹಿತ ವಿವಿಧ ಭಾಗಗಳಲ್ಲಿ ಉಪ್ಪು ನೀರಿನ ಕೃತಕ ನೆರೆಯಿಂದ ಹಲವು ಮನೆಗಳು, ತೆಂಗಿನತೋಟ, ಶಾಲೆಗಳು ಜಲಾವೃತಗೊಂಡಿದೆ. ಕಳೆದ ಐದು ದಿನಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದು, ಪ್ರಕೃತಿಗೆ ವಿರುದ್ಧ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜನರ ಪರಿಸ್ಥಿತಿ ಅಯೋಮಯವಾಗಿದೆ. ಜತೆಗೆ ಉಪ್ಪು ನೀರಿನ ಹೊಳೆಗಳಿಗೆ ತಡೆದಂಡೆ ನಿರ್ಮಿಸದ ಕಾರಣ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ -ಆನಂದ ಖಾರ್ವಿ, ಕೋಡಿತಲೆ ಸ್ಥಳೀಯ ನಿವಾಸಿ https://www.vijayavani.net/summer-has-started-but-no-shortage-of-drinking-water-in-udupi-city https://www.vijayavani.net/the-marathi-people-preserve-ancient-culture

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net