ಮಾಳಮಡ್ಡಿಯಲ್ಲಿ ಹಾಡಹಗಲೇ ಮಹಿಳೆಯನ್ನು ಕೂಡಿ ಹಾಕಿ ಕಳ್ಳತನ

8 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಮಾಳಮಡ್ಡಿಯ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿದ ಇಬ್ಬರು ಕಳ್ಳರು ಮಹಿಳೆಯನ್ನು ಕೂಡಿ ಹಾಕಿ ಚಿನ್ನಾಭರಣ ಮತ್ತು ನಗದು ದೋಚಿದ ಘಟನೆ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ. ಮಾಳಮಡ್ಡಿಯ ಕಬ್ಬೂರ ರಸ್ತೆಯ ಖ್ಯಾತ ವೈದ್ಯ ಡಾ. ಆನಂದ ಕಬ್ಬೂರ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಡಾ. ಆನಂದ ಕಬ್ಬೂರ ಹಾಗೂ ಪತ್ನಿ ವಿನೋದಿನಿ ಇಬ್ಬರೇ ಮನೆಯಲ್ಲಿ ವಾಸವಾಗಿದ್ದಾರೆ. ಡಾ. ಆನಂದ ಅವರು ಮಧ್ಯಾಹ್ನ 12.30ರ ಸುಮಾರಿಗೆ ವೈದ್ಯಕೀಯ ತಪಾಸಣೆಗಾಗಿ ಸಂಬ0ಧಿಕರೊಬ್ಬರ ಜತೆ ಆಸ್ಪತ್ರೆಗೆ ತೆರಳಿದ್ದರು. ಇದನ್ನು ಗಮನಿಸಿದ ಕಳ್ಳರು ಮನೆ ಬಾಗಿಲ ಗಂಟೆ ಬಾರಿಸಿದ್ದಾರೆ. ಮನೆಯಲ್ಲಿದ್ದ ವಿನೋದಿನಿ ಬಾಗಿಲು ತೆರೆಯುತ್ತಲೇ ಕಳ್ಳರಿಬ್ಬರು ಒಳಪ್ರವೇಶಿಸಿ ಬಾಗಿಲು ಬಂದ್ ಮಾಡಿದ್ದಾರೆ. ಬೆಡ್‌ರೂಂನತ್ತ ನುಗ್ಗಿದ ಇಬ್ಬರು ಅಲ್ಮೇರಾದಲ್ಲಿ ಹಣ ಹುಡುಕಾಡಿದ್ದಾರೆ. ತಡೆಯಲು ಯತ್ನಿಸಿದ ವಿನೋದಿನಿ ಅವರನ್ನು ತಳ್ಳಾಡಿದ್ದರಿಂದ ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿದೆ. ಅವರ ಕೊರಳಲ್ಲಿದ್ದ ಸುಮಾರು 3 ತೊಲೆ ತೂಕದ ಮಂಗಳಸೂತ್ರ ಹಾಗೂ ಅಂದಾಜು 25,000 ರೂಪಾಯಿ ಹಣವಿದ್ದ ಬಾಕ್ಸ್ ಸಮೇತ ಕಳ್ಳರು ಪರಾರಿಯಾಗಿದ್ದಾರೆ.

ಆಸ್ಪತ್ರೆಗೆ ತೆರಳಿದ್ದ ಡಾ. ಕಬ್ಬೂರ ಮನೆಗೆ ಬಂದಾಗ ತಲೆಗೆ ಗಾಯವಾಗಿ ಅಸ್ವಸ್ಥಗೊಂಡಿದ್ದ ವಿನೋದಿನಿ ಅವರಿಂದ ಮಾಹಿತಿ ಪಡೆದಿದ್ದಾರೆ. ಅಕ್ಕಪಕ್ಕದವರು ಸ್ಥಳಕ್ಕೆ ಬಂದು ವಿಚಾರಿಸಿ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿಸಿಪಿ ರವೀಶ, ಎಸಿಪಿ ಪ್ರಶಾಂತ ಸಿದ್ದನಗೌಡರ, ವಿದ್ಯಾಗಿರಿ ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ಹಾಗೂ ಶಹರ ಠಾಣೆ ಇನ್‌ಸ್ಪೆಕ್ಟರ್ ನಾಗೇಶ ಕಾಡದೇವರ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರ ತಂಡ ಸ್ಥಳ ಮಹಜರು ನಡೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net