ಪೌರಸೇವಾ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

25 MANJU 01
Published on

ಹೊಸಪೇಟೆ: ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಚೇರಿ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ, ಮೇ 27 ಮಂಗಳವಾರದಿAದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸ್ವಚ್ಛತೆ, ಕುಡಿವ ನೀರಿನ ಸರಬರಾಜು ಸೇರಿದಂತೆ ಇತರೆ ಸೇವೆಗಳು ಕೂಡ ಬಂದ್ ಆಗಲಿವೆ.

ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಲವು ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಮುಷ್ಕರ ಕೈಗೊಂಡಾಗ ಸರ್ಕಾರದ ಪೌರಾಡಳಿತದ ಉನ್ನತ ಮಟ್ಟದ ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಇದು ಹುಸಿಯಾಗಿದ್ದು, ಸರ್ಕಾರ ತಕ್ಷಣ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಕಳೆದ ಏ.12 ರಿಂದ ಮೇ 26 ವರೆಗೆ ನೌಕರರು ಬಲಗೈ ತೋಳಿಗೆ ಕಪ್ಪು ಬಟ್ಟೆ ಧರಿಸಿ, 45 ದಿನಗಳ ಕಾಲ ಮುಷ್ಕರವನ್ನು ನಡೆಸುತ್ತಿದ್ದರು. ಇದೀಗ ಈ ಮುಷ್ಕರ ಅಂತ್ಯಗೊಳ್ಳಲಿದ್ದು, ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಣಿಯಾಗಿದ್ದಾರೆ.

ಏನಿದೆ ಬೇಡಿಕೆ?

ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಘೋಷಿಸುವುದು. ರಾಜ್ಯ ಸರ್ಕಾರಿ ನೌಕರರಿಗೆ ದೊರಕುತ್ತಿರುವ ಸೌಲಭ್ಯಗಳಾದ ಕೆಜೆಐಡಿ, ಜಿಪಿಎಫ್ ಇತರ ಸವಲತ್ತು ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್‌ಮನ್, ಕಂಪ್ಯೂಟರ್ ಆಪರೇಟರ್, ವಾಹನ ಚಾಲಕರು, ಬೀದಿ ದೀಪ ನಿರ್ವಹಣೆ ಕಾರ್ಮಿಕರು, ಕ್ಲೀನರ್, ಹೆಲ್ಪರ್, ಸ್ಯಾನಿಟರಿ ಸೂಪರ ವೈಜರ್ ಸೇರಿದಂತೆ ಇನ್ನು ಅನೇಕ ವೃಂದಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಗೊಳಿಸಿ ನೇರ ನಗರ ಸ್ಥಳೀಯ ಸಂಸ್ಥೆಗಳಿAದ ನೇರ ಪಾವತಿಯಡಿ ಪರಿಗಣಿಸಬೇಕು. ನ್ಯಾಯುತ ಬೇಡಿಕೆ ಈಡೇರಿಸುವಂತೆ ಪೌರಾಡಳಿತ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಹಲವು ವರ್ಷಗಳ ಬೇಡಿಕೆಯಾಗಿದೆ. ಹಲವು ಬಾರಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಕೂಡ ಸಂಘದಿAದ ನಡೆದಿದೆ. ಆದರೂ ಸರ್ಕಾರ ಸ್ಪಂದಿಸಿಲ್ಲ. ಪೌರ ನೌಕರರ ವಿಷಯದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಹಾಗೂ ನಡೆಸುತ್ತಿರುವ ಎಲ್ಲ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿವೆ ಎಂಬ ನೌಕರರ ಆಗ್ರಹ.

ಜಿಲ್ಲಾಧಿಕಾರಿಗೆ ಮನವಿ

ಕರ್ನಾಟಕ ರಾಜ್ಯ ಪೌರನೌಕರರ ಸಂಘದ ಪದಾಧಿಕಾರಿಗಳು, ನಗರ ಸೇರಿದಂತೆ ಕಮಲಾಪುರ, ಮರಿಯಮ್ಮನಹಳ್ಳಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ, ಹೂವಿನಹಡಗಲಿ ಸ್ಥಳೀಯ ಸಂಸ್ಥೆ ಮುಖ್ಯಸ್ಥರ ಮೂಲಕ ಮೂಲಕ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ಠಾಣೆಗಳಲ್ಲಿ ಮುಷ್ಕರದ ಮನವಿ ಸಲ್ಲಿಸಲಾಗುತ್ತಿದೆ.

ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ನೇತೃತ್ವದಲ್ಲಿ ವಿವಿಧ ಬೇಡಿಕೆಗಳಿಗೆ ಮುಷ್ಕರ ನಡೆಸುವ ಮಾಹಿತಿ ಇದೆ. ಮುಷ್ಕರ ನಡೆದರೆ, ಹೊರಗುತ್ತಿಗೆ ನೌಕರರಿಂದ ಸೇವೆ ನೀಡಲಾಗುತ್ತದೆ. - ಮನೋಹರ್, ಪೌಡಾಡಳಿತ ಯೋಜನಾ ನಿರ್ದೇಶಕ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net