

ಹೊಸಪೇಟೆ: ಡಾ.ಬಿ.ಆರ್.ಅಂಬೇಡ್ಕರ್ ಅವರು 1927ರ ಡಿ.25ರಂದು ಮನುಸ್ಮೃತಿ ದಹಿಸಿದ ಘಟನೆಯ ಸ್ಮರಣಾರ್ಥ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ನಗರದ ಅಂಬೇಡ್ಕರ್ ಪ್ರತಿಮೆ ಎದುರು ಬುಧವಾರ ಮನುಸ್ಮೃತಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮನುಸ್ಮೃತಿ ಮಹಿಳಾ ವಿರೋಧಿ ಮಾತ್ರವಲ್ಲ, ಮಾನವ ವಿರೋಧಿಯೂ ಹೌದು. ಈ ದೇಶದ ಮೂಲ ನಿವಾಸಿಗಳನ್ನು ಗುಲಾಮರನ್ನಾಗಿ ಮಾಡುವ ಹುನ್ನಾರ ಅದರಲ್ಲಿ ಅಡಗಿದೆ ಎಂಬುದನ್ನು ಅರಿತಿದ್ದ ಡಾ.ಅಂಬೇಡ್ಕರ್ ಅದನ್ನು ಬಹಿರಂಗವಾಗಿ ದಹಿಸಿದ್ದರು. ದೇಶ ಸ್ವತಂತ್ರಗೊAಡಾಗ ಸಂವಿಧಾನ ಕೊಟ್ಟು ನಮ್ಮೆಲ್ಲರ ಬಾಳಿಗೆ ಬೆಳಕು ನೀಡಿದ್ದಾರೆ. ಈಗ ನಾವು ಮನುಸ್ಮೃತಿ ಪ್ರತಿಕೃತಿ ದಹಿಸುವ ಮೂಲಕ ದೇಶದಲ್ಲಿ ಮುಂದೆ ಬ್ರಾಹ್ಮಣ್ಯಶಾಹಿ ಮನಸ್ಥಿತಿ ಬಿತ್ತಲು ಬಿಡುವುದಿಲ್ಲ ಎಂಬುದರ ಸಂಕೇತವಾಗಿದೆ. ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ, ಜಾತಿ ಹಾಗೂ ಲಿಂಗ ತಾರತಮ್ಯ ಮಾಡುವ, ದಲಿತ, ಹಿಂದುಳಿದ ಹಾಗೂ ಶೂದ್ರ ಸಮುದಾಯಗಳ ವಿರೋಧಿಯಾದ ಮನುಸ್ಮೃತಿ ಸಮಾನತೆಗೆ ವಿರುದ್ಧವಾಗಿದೆ. ಎಲ್ಲರೂ ಎಚ್ಚೆತ್ತುಕೊಂಡು ಸಂವಿಧಾನವನ್ನು ಉಳಿಸಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡೋಣ. ದೇಶದಲ್ಲಿ ಕೋಮು ವಿಚಾರಗಳನ್ನು ಮುನ್ನೆಲೆಗೆ ತಂದು ಅಶಾಂತಿ ಸೃಷ್ಟಿಸುತ್ತಿರುವ ಸಂಘ ಪರಿವಾರ ತನ್ನ ಕುಚೇಷ್ಟೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಎಚ್.ಆರ್, ಹಾರ್ನಳ್ಳಿ ಲಕ್ಷ್ಮಣ, ಮಾಳಗಿ ಸ್ವಾಮಿ, ಕಾರಿಗನೂರು ಲಕ್ಷ್ಮಣ, ಜಗನ್ನಾಥ, ನಾಗಪ್ಪ, ಮೋರಿಗೇರಿ ರಮೇಶ, ಬಿಸರಹಳ್ಳಿ ಹುಲುಗಪ್ಪ, ಅಮರಾವತಿ ಮಲ್ಲಪ್ಪ, ವಿಜಯಕುಮಾರ ಇತರರಿದ್ದರು.