ಹೊಸಪೇಟೆ: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯನಗರ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ವಿ.ಎಸ್. ಹಾಗೂ ತನ್ನ ಡ್ರೈವರ್ ಜತೆಗೆ ಬುಧವಾರ ಸಂಜೆ 20 ಸಾವಿರ ರೂ. ನಗದು ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಹರಪನಹಳ್ಳಿಯ ಚಾಲಕ ಕಂ ನಿರ್ವಾಹಕ ಮಹಾಬಲೇಶ್ವರ ಭಾಗವತ್ ಎಂಬವರ ವಿರುದ್ಧದ ಪ್ರಕರಣಯೊಂದರ ಇಲಾಖಾ ವಿಚಾರಣೆಯನ್ನು ಸ್ಥಗಿತಗೊಳಿಸುವ ಕುರಿತು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಡಲಾಗಿದೆ. ಈ ಹಿಂದೆ ಜಗದೀಶ್ ವಿ.ಎಸ್. ಅವರ ಕಾರು ಚಾಲಕ ಮಲ್ಲಿಕಾರ್ಜುನಗೆ ಐದು ಸಾವಿರ ರೂ. ನಗದು ನೀಡಲಾಗಿತ್ತು. ಮತ್ತೆ 20 ಸಾವಿರ ರೂ. ಲಂಚ ನೀಡಲು ಬಂದಾಗ ಹೊಸಪೇಟೆ ಲೋಕಾಯುಕ್ತ ತಂಡ ಬಲೆಗೆ ಬೀಳಿಸಿದೆ. ಜಗದೀಶ್ ವಿ.ಎಸ್. ಹಾಗೂ ಮಲ್ಲಿಕಾರ್ಜುನ ಇಬ್ಬರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಹೊಸಪೇಟೆ ಲೋಕಾಯುಕ್ತ ಡಿವೈಎಸ್ಪಿ ಶೀಲವಂತ ಎಸ್., ಇನ್ಸ್ಪೆಕ್ಟರ್‌ಗಳಾದ ರಾಜೇಶ್ ಎಸ್.ಲಮಾಣಿ, ಸುರೇಶ್ ಬಾಬು ಹಾಗೂ ಸಿಬ್ಬಂದಿ ದಾಳಿ ನಡೆಸಿ ಕ್ರಮಕೈಗೊಂಡಿದ್ದಾರೆ.