ನೀರು, ಊಟದಲ್ಲಿಲ್ಲ ದೋಷ

VASATI NILAYA
ಹೊಸಪೇಟೆಯ ಜಂಬುನಾಥ ರಸ್ತೆಯಲ್ಲಿರುವ ನಂತರದ ಸರ್ಕಾರಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ.
Published on

ಹೊಸಪೇಟೆ: ನಗರದ ಹಾಸ್ಟೆಲ್ ವಿದ್ಯಾರ್ಥಿನಿಯರ ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯೋಗಾಯದ ವರದಿ ಬಂದಿದೆ. ಅನ್ನ ಆಹಾರದಲ್ಲಿ ಯಾವುದೇ ಸಮಸ್ಯೆಯಿಲ್ಲವೆಂದು ಅಭಿಪ್ರಾಯ ಪಟ್ಟಿದೆ. ಹಾಗಾದರೆ, ಏಕಕಾಲಕ್ಕೆ ಅಷ್ಟೊಂದು ಜನರು ಅನಾರೋಗ್ಯಕ್ಕೀಡಾಗಿದ್ದು ಹೇಗೆ ಎಂಬುದು ನಿಗೂಢವಾಗಿದೆ.

ಇಲ್ಲಿನ ಜಂಬುನಾಥ ರಸ್ತೆಯಲ್ಲಿರುವ ನಂತರದ ಸರ್ಕಾರಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ 184 ಪೈಕಿ 49 ವಿದ್ಯಾರ್ಥಿನಿಯರು ವಾಂತಿ, ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಮರ‍್ನಾಲ್ಕು ದಿನಗಳಲ್ಲಿ ಎಲ್ಲರೂ ಗುಣಮುಖರಾದರು.

ಚಿಕನ್ ಮೇಲಿತ್ತು ಎಲ್ಲರ ಅನುಮಾನ:

ಆಗಸ್ಟ್ 9 ರಂದು ರಾತ್ರಿ ಹಾಸ್ಟೆಲ್‌ನಲ್ಲಿ ಚಿಕಿನ್ ಉಣಬಡಿಸಲಾಗಿತ್ತು. ಚಿಕನ್ ಸೇವಿಸಿದವರಲ್ಲಿ ಮಾತ್ರ ಅನಾರೋಗ್ಯ ಕಾಣಿಸಿಕೊಂಡಿದೆ. ಸಸ್ಯಾಹಾರ ಸೇವಿಸಿದವರು ಆರೋಗ್ಯವಾಗಿದ್ದಾರೆ. ವಸತಿ ನಿಲಯದಲ್ಲಿ ಕುಡಿಯುವ ನೀರು ಶುದ್ಧವಾಗಿಲ್ಲ ಎಂದು ಅಸ್ವಸ್ಥ ವಿದ್ಯಾರ್ಥಿನಿಯರು ದೂರಿದ್ದರು. ಹೀಗಾಗಿ ಬಹುತೇಕ ಚಿಕನ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ಕಾರಣ ನಿಗೂಢ

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಡಳಿತ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮೂಲಕ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಸೇವಿಸಿದ್ದ ಚಿಕನ್ ಸಾಂಬರ್, ಅನ್ನ, ಕುಡಿಯುವ ನೀರು, ಅಕ್ಕಿ, ಗೋಧಿ ಹಿಟ್ಟು, ಸೇಂಗಾ ಬೀಜ ಸೇರಿದಂತೆ 6 ಪದಾರ್ಥಗಳ ಮಾದರಿಯನ್ನು ಸಂಗ್ರಹಿಸಿತ್ತು.

ಈ ಕುರಿತು ನಿಖರ ಮಾಹಿತಿಗಾಗಿ ಮಾದರಿಗಳನ್ನು ಬೆಂಗಳೂರಿನ ಖಾಸಗಿ ಮೈಕ್ರೋ ಬಯೋಲಜಿ ಪ್ರಯೋಗಾಲಯಕ್ಕೆ ಕಳಹಿಸಿತ್ತು.
ಅದನ್ನು ಎಫ್‌ಎಸ್‌ಎಸ್‌ಐ ಮಾರ್ಗಸೂಚಿಯಂತೆ 10 - 15 ದಿನಗಳ ಕಾಲ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಆ.೩೦ ರಂದು ವರದಿ ಬಂದಿದ್ದು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ಜಿಲ್ಲಾ ಆರೋಗ್ಯಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಈಗಾಗಲೇ ಸಲ್ಲಿಕೆಯಾಗಿದೆ.

ವಿದ್ಯಾರ್ಥಿಗಳು ಸೇವಿಸಿದ ಅನ್ನ, ಚಿಕನ್ ಸಾರು ಹಾಗೂ ಕುಡಿಯುವ ನೀರಿನಲ್ಲಿ ಯಾವುದೇ ಸಮಸ್ಯೆಯಿಲ್ಲವೆಂದು ಪ್ರಯೋಗಾಲಯ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಘಟನೆಗೆ ನಿಖರ ಕಾರಣವೇನು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲದಂತಾಗಿದೆ.

ಮಾದರಿ ಸಂಗ್ರಹದಲ್ಲೇ ಯಡವಟ್ಟು?

ಆಗಸ್ಟ್ 9 ರಂದು ರಾತ್ರಿ ಮತ್ತು ಮರುದಿನ ಬೆಳಗ್ಗೆ ಹಾಸ್ಟೆಲ್‌ನಲ್ಲಿ ಸಿದ್ಧಗೊಳಿಸಿದ್ದ ಆಹಾರ ಸ್ಯಾಂಪಲ್ ಮಾತ್ರ ಸಂಗ್ರಹಿಸಿ, ಲ್ಯಾಬ್‌ಗೆ ಕಳುಹಿಸಿತ್ತು. ಆದರೆ, ಆ.9 ರಂದು ಬೆಳಗ್ಗೆ ಮತ್ತು ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಸೇವಿಸಿದ್ದ ಆಹಾರದ ಮಾದರಿ ಸಂಗ್ರಹಿಸಿಲ್ಲ. ಅದರಿಂದಲೂ ವಿಷಾಹಾರ ಆಗಿರಬಹುದು ಎಂಬುದು ತಜ್ಞ ವೈದ್ಯರ ಅನುಮಾನ.

ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ವಿಭಾಗದಿಂದ ಹಾಸ್ಟೆಲ್‌ನಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, ಅದು ಕುಡಿಯಲು ಯೋಗ್ಯವಿಲ್ಲ ಎಂದು ತಿಳಿದು ಬಂದಿದೆ. ಆದರೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮೂಲಕ ಬಯೋಲಾಜಿಕಲ್ ಲ್ಯಾಬ್‌ಗೆ ಕಳುಹಿಸಿದ್ದು ನನಗೆ ಮಾಹಿತಿ ಇಲ್ಲ. ಸಂಬಂಧಿಸಿದವರಿಂದ ವರದಿ ಪಡೆದು, ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇವೆ. - ಡಾ.ಶಂಕರ್ ನಾಯ್ಕ, ಡಿಎಚ್‌ಒ.

ಪ್ರಯೋಗಾಲಯದ ವರದಿ ಇನ್ನೂ ಗಮನಿಸಿಲ್ಲ. ಆದರೆ, ಚಿಕನ್ ಸಾರಿನಲ್ಲಿ ಖಾರ ಸ್ವಲ್ಪ ಹೆಚ್ಚಿತ್ತು ಎಂದು ಕೆಲ ವಿದ್ಯಾರ್ಥಿನಿಯರು ಹೇಳಿದ್ದರು. ಅದರಿಂದಲೂ ಫುಡ್ ಪಾಯಿಸನ್ ಆಗಿರಬಹುದು. ಕುಡಿಯುವ ನೀರಿನಿಂದಾಗಿದ್ದರೆ, ಎಲ್ಲರಿಗೂ ಸಮಸ್ಯೆಯಾಗುತ್ತಿತ್ತು. ಈ ಕುರಿತು ಪರಿಶೀಲಿಸುತ್ತೇನೆ. ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net