

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದು, ಪ್ರಧಾನಿ ಮೋದಿ ಸೇರಿದಂತೆ ಎನ್ಡಿಎ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಹಾರೈಸಿದ್ದಾರೆ. ಇನ್ನೂ ರೇಖಾ ಗುಪ್ತಾ (Rekha Gupta) ದೆಹಲಿ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿದ್ದಂತೆ ಅವರ ಹಳೆಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ಮಾರ್ಮಿಕ ಪೋಸ್ಟ್ಅನ್ನು ಹಂಚಿಕೊಂಡು ಗೆಳತಿಗೆ ಶುಭಹಾರೈಸಿದ್ದಾರೆ.
ಸರಿಸುಮಾರು 30 ವರ್ಷಗಳ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ ಅಲ್ಕಾ ಲಂಬಾ ಹಾಗೂ ರೇಖಾ ಗುಪ್ತಾ (Rekha Gupta) ಅವರು ಒಟ್ಟಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು 1995 ರ ಸ್ಮರಣೀಯ ಫೋಟೋ - ನಾನು ಮತ್ತು ರೇಖಾ ಗುಪ್ತಾ ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಿದಾಗ ಎಂದು ಅಡಿಬರಹವನ್ನು ನೀಡಿದ್ಧಾರೆ. ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ರೇಖಾ ಗುಪ್ತಾ ಅವರಿಗೆ ಅಭಿನಂದನೆಗಳು. ನಿಮ್ಮ ಆಡಳಿತದಲ್ಲಿ ಯಮುನಾ ನದಿ ಸ್ವಚ್ಛವಾಗಿರುತ್ತದೆ ಮತ್ತು ಹೆಣ್ಣುಮಕ್ಕಳು ಸುರಕ್ಷಿತವಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
ಮೂಲತಃ ಹರಿಯಾಣದವರಾದ ರೇಖಾ ಗುಪ್ತಾ (Rekha Gupta) ಅವರು ದೆಹಲಿಯಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ಧಾರೆ. ದೆಹಲಿ ಘಟಕದ ಹಿರಿಯ ಬಿಜೆಪಿ ನಾಯಕರಲ್ಲಿ ಒಬ್ಬರಾದ ರೇಖಾ ಗುಪ್ತಾ ಆವರು ರಾಜಕೀಯ ಜೀವನ ಮತ್ತು ವಿದ್ಯಾರ್ಥಿ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ. 50 ವರ್ಷದ ಅವರು ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ರಾಷ್ಟ್ರೀಯ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದೆಹಲಿಯ ದೌಲತ್ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿರುವ ರೇಖಾ ಅವರು ವೃತ್ತಿಯಲ್ಲಿ ವಕೀಲರಾಗಿದ್ದಾರೆ. 2025ರಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಶಾಲಿಮಾರ್ ಭಾಗ್ (ವಾಯುವ್ಯ) ಕ್ಷೇತ್ರದಿಂದ ಸ್ಫರ್ಧಿಸಿ ಆಪ್ ಅಭ್ಯರ್ಥಿ ವಂದನಾ ಕುಮಾರಿ ಎದುರು 29,595 ಮತಗಳ ಅಂತರದಿಂದ ಭರ್ಜರಿ ಜಯ ಗಳಿಸಿದರು. ವಿದ್ಯಾರ್ಥಿಯಾಗಿದಾಗಿನಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ರೇಖಾ ಗುಪ್ತಾ ಅವರು 1996-97ರ ಅವಧಿಯಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (DUSU) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2007 ಮತ್ತು 2012ರಲ್ಲಿ ಉತ್ತರಿ ಪಿತಾಂಪುರ ವಾರ್ಡ್ನಿಂದ ಕೌನ್ಸಿಲರ್ ಚುನಾವಣೆ ಗೆದ್ದ ರೇಖಾ ಅವರು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸೇರಿದಂತೆ ವಿವಿಧ ಮೋರ್ಚಾಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ ಖ್ಯಾತಿ ಪಡೆದಿರುವ ರೇಖಾ ಅವರು ಮೇಯರ್ ಆಗಿದ್ದ ಅನುಭವವೇ ಅವರನ್ನು ಸಿಎಂ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಲು ಮುಖ್ಯ ಕಾರಣ ಎಂದು ಹೇಳಲಾಗಿದೆ.