

ಗುಜರಾತ್: ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಲು ಮತ್ತು ಆರೋಗ್ಯ ಸೌಲಭ್ಯವನ್ನು ಎಲ್ಲರಿಗೂ ದೊರಕುವಂತೆ ಮಾಡುವ ಉದ್ದೇಶದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮ ವರ್ಚುವಲ್ ಆಗಿ ಆಯುಷ್ಮಾನ್ ಭವ ಅಭಿಯಾನ ಮತ್ತು ಪೋರ್ಟ್ಲ್ಗೆ ಇಂದು ಚಾಲನೆ ನೀಡಿದರು.
ಗಾಂಧಿ ನಗರದ ರಾಜ ಭವನದಲ್ಲಿ ಕೇಂದ್ರ ಆರೋಗ್ಯ ಮಂತ್ರಿ ಡಾ. ಮನ್ಸುಖ್ ಮಾಂಡವೀಯ, ಗುಜರಾತ್ ಮುಖ್ಯಮಂತ್ರಿ ಭುಪೇಂದ್ರಬಾಯ್ ಪಟೇಲ್ ಸೇರಿದಂತೆ ಇನ್ನಿತರ ಸಂಪುಟ ಸದಸ್ಯರ ಸಮ್ಮುಖದಲ್ಲಿ ಆಯುಷ್ಮಾನ್ ಭವ ಅಭಿಯಾನ ಮತ್ತು ಪೋರ್ಟಲ್ಗೆ ಚಾಲನೆ ನೀಡಲಾಗಿದೆ.
ಈ ಕುರಿತಾಗಿ ಮಾತನಾಡಿದ ದ್ರೌಪದಿ ಮುರ್ಮ, ಈ ಅಭಿಯಾನವು ಯೂನಿವರ್ಸಲ್ ಹೆಲ್ತ್ ಕವರೇಜ್ (UHC)ನ್ನು ವೃದ್ಧಿಸಲು ಉಪಯುಕ್ತವಾಗಲಿದೆ. ದೇಶದ ಪ್ರತಿಯೊಬ್ಬರಿಗೂ ಇದರಿಂದ ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಆಯುಷ್ಮಾನ್ ಭವ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ಗ್ರಾಮ ಪಂಚಾಯತ್ಗಳನ್ನು ಆಯುಷ್ಮಾನ್ ಗ್ರಾಮ ಪಂಚಾಯತ್ ಎಂದು ಗುರುತಿಸಲಾಗುವುದು ಎಂದರು.
ಸೆ.17ರಿಂದ ಅ.2ರ ವರೆಗೆ ನಡೆಯಲಿರುವ ಸೇವಾ ಪಖ್ವಾಡ ಕಾರ್ಯಕ್ರಮ ಪ್ರತಿಯೊಬ್ಬರೂ ಅಗತ್ಯ ಇರುವ ಆರೋಗ್ಯ ಸೇವೆಗಳನ್ನು ಪಡೆಯುತ್ತಿದ್ದಾರೋ ಇಲ್ಲವೋ ಎನ್ನುವುದನ್ನು ಖಾತ್ರಿ ಪಡಿಸುತ್ತದೆ. ರಾಷ್ಟ್ರಪತಿಗಳು ಅಭಿಯಾನದ ಉದ್ದೇಶಗಳ ಬಗ್ಗೆ ವಿವರಿಸುತ್ತಾ, ಹಲವು ಆರೋಗ್ಯ ಯೋಜನೆಗಳು ಮತ್ತು ರೋಗಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಆಯುಷ್ಮಾನ್ ಕಾರ್ಡ್ ಮತ್ತು ಆಭಾ (ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್) ಐಡಿಗಳನ್ನು ವಿತರಿಸಲು ಈ ಅಭಿಯಾನವು ಸಹಕಾರಿಯಾಗಲಿದೆ. ಆಯುಷ್ಮಾನ್, ಆಪ್ಕೆ ದ್ವಾರ್ 3.0, ಆರೋಗ್ಯ ಮತ್ತು ಕಲ್ಯಾಣ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಸಭಾಗಳಲ್ಲಿ ಆರೋಗ್ಯ ಮೇಳಗಳನ್ನು ಹಮ್ಮಿಕೊಳ್ಳುವುದರ ಮೂಲಕ ಭಾರತದ ಆರೋಗ್ಯ ವ್ಯವಸ್ಥೆಯನ್ನು ವೃದ್ಧಿಸಬಹುದು. ದೇಶವು ಡಿಜಿಟಲೀಕರಣದಲ್ಲಿ ಮುಂದುವರೆದಿದ್ದು, ಇದರ ಮೂಲಕ ಆರೋಗ್ಯ ಸೌಲಭ್ಯಗಳನ್ನು ಜಿಲ್ಲೆ ಮತ್ತು ಗ್ರಾಮಗಳಿಗೆ ತಲುಪಿಸಬಹುದು ಎಂದರು.
ಕೇಂದ್ರ ಆರೋಗ್ಯ ಮಂತ್ರಿ ಡಾ. ಮನ್ಸುಖ್ ಮಾಂಡವೀಯ ಮಾತನಾಡಿ, ಆಯುಷ್ಮಾನ್ ಭವ ಅಭಿಯಾನದ ಅಡಿಯಲ್ಲಿ ಎಲ್ಲಾ ಆರೋಗ್ಯ ಮತ್ತು ಕಲ್ಯಾಣ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವಾರಕ್ಕೊಮ್ಮೆ ಆರೋಗ್ಯ ಮೇಳ ಮತ್ತು ತಪಾಸಣಾ ಶಿಬಿರಗಳನ್ನು ನಡೆಸಲಾಗುವುದು. ಈ ಅಭಿಯಾನದ ಮೂಲಕ ಪ್ರತಿಯೊಬ್ಬರೂ ಆರೋಗ್ಯ ಸೇವೆಯನ್ನು ಸುಲಭವಾಗಿ ಪಡೆಯಬಹುದು ಎಂದರು.