ಸಾಧಕರನ್ನು ಗೌರವಿಸುವುದು ಹೆಮ್ಮೆ

Kin_Achivers
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಬಜ್ಪೆ ವ್ಯವಸಾಯ ಬ್ಯಾಂಕ್ ತನ್ನ ಲಾಭಾಂಶದಲ್ಲಿ ಸ್ವಲ್ಪಾಂಶವನ್ನು ಶೈಕ್ಷಣಿಕ, ಕ್ರೀಡಾ ಕ್ಷೇತ್ರದ ಸಾಧನೆಗೆ ಪ್ರೋತ್ಸಾಹಕವಾಗಿ ವಿನಿಯೋಗಿಸುತ್ತಾ ಬಂದಿದೆ. ಬ್ಯಾಂಕ್ ವ್ಯಾಪ್ತಿಯಲ್ಲಿ ಗರಿಷ್ಠ ಸಂಖ್ಯೆಯ ಸಾಧಕರನ್ನು ಗೌರವಿಸುವುದು ಬ್ಯಾಂಕಿಗೂ ಹೆಮ್ಮೆ ತರುವ ಸಂಗತಿ ಎಂದು ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು ಹೇಳಿದರು.

ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ‘ವಜ್ರ’ ಸಭಾಂಗಣದಲ್ಲಿ ಶನಿವಾರ ಪ್ರತಿಭಾ ಪುರಸ್ಕಾರ, ಕ್ರೀಡಾ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಕ್ಷೇತದಲ್ಲಿ ಸಾಧನೆ ಮಾಡಿದಾಗ ಅವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದರು.

ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಎಂಎಸ್‌ಸಿ ಅನ್ವಯಿಕ ರಸಾಯನ ಶಾಸ್ತ್ರ ಪರೀಕ್ಷೆಯಲ್ಲಿ ಚಿನ್ನದ ಪದಕ ಸಹಿತ ಪ್ರಥಮ ರ‍್ಯಾಂಕ್ ಪಡೆದ ಬಜ್ಪೆಯ ಪರ್ಲ್ ವೆನಿಶಾ ಮಸ್ಕರೇನಸ್ ಅವರನ್ನು ನಗದು ಪುರಸ್ಕಾರ ಸಹಿತ ಸನ್ಮಾನಿಸಲಾಯಿತು. ಬಜ್ಪೆ ವ್ಯವಸಾಯ ಬ್ಯಾಂಕ್ ವ್ಯಾಪ್ತಿಯ 14 ಗ್ರಾಮಗಳ ವ್ಯಾಪ್ತಿಯ 13 ಪ್ರೌಢಶಾಲೆಗಳ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯ ಅಂಕ ಗಳಿಸಿದ 29 ಮಂದಿ ವಿದ್ಯಾರ್ಥಿಗಳಿಗೆ ಹಾಗೂ ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯ ಅಂಕಗಳೊಂದಿಗೆ ಉತ್ತೀರ್ಣರಾದ 4 ಪಿಯು ಕಾಲೇಜುಗಳ 12 ಮಂದಿ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ನಗದು ಪುರಸ್ಕಾರ ಸಹಿತ ಸನ್ಮಾನಿಸಲಾಯಿತು.

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಖೋಖೋ ಪಂದ್ಯಾಟ ಹಾಗೂ ರಿಲೇ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲೆಯ ಸಾಧಕ ವಿದ್ಯಾರ್ಥಿಗಳ ತಂಡವನ್ನು ಹಾಗೂ ತಂಡದ ತರಬೇತುದಾರರಾದ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾಲತಾ ಅವರನ್ನು ತಲಾ 5 ಸಾವಿರ ರೂ. ನಗದು ಸಹಿತ ಅಭಿನಂದಿಸಲಾಯಿತು. ತಂಡದ ವ್ಯವಸ್ಥಾಪಕರಾಗಿದ್ದ ಶಿಕ್ಷಕ ಡಾ.ಅನಿತ್ ಕುಮಾರ್ ಅವರನ್ನು ಗೌರವಿಸಲಾಯಿತು.

ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಿಯು ಕಾಲೇಜಿನ ಪ್ರಿನ್ಸಿಪಾಲ್ ಮಾಲಿನಿ, ಬಜ್ಪೆ ಬಂಟ್ಸ್ ಪಾಪ್ಯುಲರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಹನಾ ಎಂ.ಫೆಹಲ್ಲವಿ, ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಇಂದಿರಾ ಎನ್.ರಾವ್ ಮುಖ್ಯ ಅಭ್ಯಾಗತರಾಗಿದ್ದರು. ಬ್ಯಾಂಕ್‌ನ ಉಪಾಧ್ಯಕ್ಷ ವಸಂತ, ನಿರ್ದೇಶಕರಾದ ಡೆನಿಸ್ ಡಿಸೋಜ, ಸ್ಟಾೃನಿ ಡಿಸೋಜ, ರಿತೇಶ್ ಶೆಟ್ಟಿ, ಗೀತಾ ಕೆ.ಅಮೀನ್, ಮೋಹನ್ ಪೂಜಾರಿ, ಮೊಹಮ್ಮದ್ ಶರೀಫ್, ಗೀತಾ, ಭಾಸ್ಕರ ಮಲ್ಲಿ, ಸವಿತಾ, ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಕಿರಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕಿ ಪ್ರೆಸಿಲ್ಲಾ ಪಿರೇರಾ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net