ಈಶ್ವರ್​ ಮಲ್ಪೆಯ ಸೇವೆಗೆ ಬೆಲೆ ಕಟ್ಟಲಾಗದು

UDP-1-3-Putthila
Published on

ಅರುಣಕುಮಾರ್​ ಪುತ್ತಿಲ ಅಭಿಪ್ರಾಯ

ಟ್ರಸ್ಟ್​ ವತಿಯಿಂದ 1 ಲಕ್ಷ ರೂ. ಕೊಡುಗೆ

ವಿಜಯವಾಣಿ ಸುದ್ದಿಜಾಲ ಉಡುಪಿ
ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ, ಹಲವು ಕ್ಲಿಷ್ಟಕರ ಸಂದರ್ಭದಲ್ಲಿ, ಜಲ ಅವಘಡದಲ್ಲಿ ಮೃತಪಟ್ಟವರ ದೇಹಗಳನ್ನು ಮೇಲೆತ್ತಿ ಸಹಕರಿಸುವ ಮಲ್ಪೆಯ ಮುಳುಗುತಜ್ಞ, ಆಪತ್ಬಾಂಧವ ಈಶ್ವರ್​ ಮಲ್ಪೆ ಅವರ ಸೇವೆಗೆ ಯಾರಿಂದಲೂ ಬೆಲೆ ಕಟ್ಟಲಾಗದು ಎಂದು ಅರುಣಕುಮಾರ್​ ಪುತ್ತಿಲ ಅಭಿಪ್ರಾಯಪಟ್ಟರು.

ಮಲ್ಪೆಯ ಈಶ್ವರ್​ ಮಲ್ಪೆ ಅವರ ಮನೆಗೆ ಸೋಮವಾರ ಭೇಟಿ ನೀಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್​ ವತಿಯಿಂದ 1 ಲಕ್ಷ ರೂ. ಚೆಕ್​ಅನ್ನು ಈಶ್ವರ್​ ಮತ್ತು ಗೀತಾ ದಂಪತಿಗೆ ಹಸ್ತಾಂತರಿಸಿ, ಅವರನ್ನು ಸನ್ಮಾನಿಸಿ ಮಾತನಾಡಿದರು.

ಕಡೆಗಣನೆಯಿಂದ ಬೇಸರ

ತನ್ನ ಮಕ್ಕಳು ಅಂಗವಿಕಲರಾಗಿದ್ದರೂ, ತೀವ್ರ ಅನಾರೋಗ್ಯದಿಂದಿದ್ದರೂ ತನ್ನ ಮನೆಯ ಪರಿಸ್ಥಿತಿಯನ್ನೂ ಲೆಕ್ಕಿಸದೆ ಕಷ್ಟದಲ್ಲಿ ಸಿಲುಕಿದವರ ರಕ್ಷಣೆಗೆ ಎಂತಹ ಕಠಿಣ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲೂ ಈಶ್ವರ್​ ಮಲ್ಪೆ ಅಲ್ಲಿ ಪ್ರತ್ಯಕ್ಷವಾಗುತ್ತಾರೆ. ಅಂಕೋಲಾದ ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿದ್ದ ಕೇರಳದ ಚಾಲಕ ಅರ್ಜುನ್​ ಹಾಗೂ ಲಾರಿ ಗುರುತಿಸುವಲ್ಲಿಯೂ ಈಶ್ವರ್​ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಅಂತಿಮ ಹಂತದಲ್ಲಿ ಅಧಿಕಾರಿಗಳು ಮತ್ತು ಸರ್ಕಾರ ಅವರನ್ನು ಕಡೆಗಣಿಸಿರುವುದು ಬೇಸರ ತಂದಿದೆ ಎಂದರು.

7 ಗಂಟೆಯಲ್ಲಿ ಲಕ್ಷ ರೂ. ಸಂಗ್ರಹ

ದೃಶ್ಯ ಮಾಧ್ಯಮಗಳಲ್ಲಿ ಈಶ್ವರ್​ ಮಲ್ಪೆ ಕುರಿತಾದ ವರದಿ ವೀಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್​ ನ ಪ್ರಮುಖರು "ಪುತ್ತಿಲ ಬ್ರಿಗೇಡ್​' ವಾಟ್ಸಾಪ್​ ಗ್ರೂಪ್​ನಲ್ಲಿ ಸಹಕಾರದ ಸಂದೇಶ ಹಾಕಿದ್ದರು. ಕೇವಲ 7 ಗಂಟೆಯಲ್ಲಿ ಒಂದು ಲಕ್ಷ ರೂ. ಸಂಗ್ರಹವಾಗಿದ್ದು, ಇದು ಈಶ್ವರ್​ ಮಲ್ಪೆ ಅವರ ಕುರಿತು ಜನರಿಗಿರುವ ಅಭಿಮಾನ ತೋರಿಸುತ್ತದೆ ಎಂದು ಟ್ರಸ್ಟ್​ನ ಪ್ರಮುಖರು ತಿಳಿಸಿದ್ದಾರೆ.

ಉಡುಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕ ಮಂಜು ಕೆ. ಮಲ್ಪೆ, ಉಡುಪಿ ಹಿಂದು ಯುವಸೇನೆಯ ನಗರ ಅಧ್ಯಕ್ಷ ಸುನೀಲ್​ ನೇಜಾರು, ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಪ್ರದಿಪ್​ ಕುಂದಾರು, ಯುವ ಮೋರ್ಚಾ ಉಪಾಧ್ಯಕ್ಷ ಧನುಶ್​ ಇತರರು ಉಪಸ್ಥಿತರಿದ್ದರು.

ಆಪದ್ಬಾಂಧವ ತುರ್ತು ಸೇವಾ ಘಟಕ ಸ್ಥಾಪಿಸಿ

ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಈಶ್ವರ್​ ಮಲ್ಪೆ ಅಗರ್ಭ ಶ್ರೀಮಂತ. ಅವರ ಸೇವೆಯನ್ನು ಕೇವಲ ಶ್ಲಾಘಿಸಿದರೆ ಸಾಕಾಗುವುದಿಲ್ಲ. ಎಲ್ಲರೂ ಅವರನ್ನು ಬೆಂಬಲಿಸಬೇಕು. 200ಕ್ಕೂ ಅಧಿಕ ಜೀವಗಳನ್ನು ನೀರಿನಿಂದ ಮೇಲೆತ್ತಿದ ಈ ಸಾಧಕನ ಹೆಸರಲ್ಲಿ ಸರ್ಕಾರ "ಆಪದ್ಬಾಂಧವ ಈಶ್ವರ್​ ಮಲ್ಪೆ ತುರ್ತು ಸೇವಾ ಘಟಕ' ಸ್ಥಾಪಿಸಬೇಕು. ತನ್ಮೂಲಕ ರಾಜ್ಯದೆಲ್ಲೆಡೆ ತರಬೇತಿ ಪಡೆದ ಒಂದು ತುರ್ತು ಸೇವಾ ತಂಡ ರಚಿಸುವಂತೆ ಸರ್ಕಾರ ಇವರಿಗೆ ಸವಲತ್ತು ನೀಡಬೇಕು. ಅವರ ಸಾಮಾಜಿಕ ಸೇವೆ ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಅರುಣಕುಮಾರ್​ ಪುತ್ತಿಲ ಒತ್ತಾಯಿಸಿದರು.

ನಾನು ಹಣಕ್ಕೋಸ್ಕರ ಈ ಸೇವೆ ಮಾಡುತ್ತಿಲ್ಲ. ಇದುವರೆಗೂ ನಾನು ಯಾರಿಂದಲೂ ಹಣ ಪಡೆದಿಲ್ಲ. ದೇವರು ನನಗೆ ನೊಂದವರಿಗೆ ಸಹಕರಿಸುವ ಶಕ್ತಿ ನೀಡಿದ್ದರಿಂದ ನನ್ನ ತಂಡದೊಂದಿಗೆ ಈ ಕಾರ್ಯ ಮಾಡುತ್ತಿದ್ದೇನೆ.| ಈಶ್ವರ್​ ಮಲ್ಪೆ. ಸಮಾಜಸೇವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net