ಇನ್ನಷ್ಟು ಸಾಮಾಜಿಕ ಸೇವೆಗೆ ಭಗವಂತ ಅನುಗ್ರಹಿಸಲಿ...

Shree
Published on

ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವಚನ

ಹೆಗ್ಗುಂಜೆ ಡಾ. ಎಚ್​.ಎಸ್​. ಶೆಟ್ಟಿಗೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ದಾನದ ಕಾರ್ಯ ಪುಣ್ಯದ ಕಾರ್ಯ. ಅದನ್ನು ಎಲ್ಲರಿಗೂ ಮಾಡಲು ಸಾಧ್ಯವಿಲ್ಲ. ಉಡುಪಿಯ ವಿಶ್ವನಾಥ್​ ಶೆಣೈ ಅವರು ಒಳ್ಳೆಯ ದಾನಿಗಳಾಗಿದ್ದು, ಹೆಗ್ಗುಂಜೆ ಡಾ. ಎಚ್​.ಎಸ್​. ಶೆಟ್ಟಿ ಮಹಾ ದಾನಿಯಾಗಿದ್ದಾರೆ. ಈರ್ವರಿಂದಲೂ ಇನ್ನೂ ಹೆಚ್ಚು ಸಮಾಜ ಸೇವಾ ಕಾರ್ಯ ನಡೆಸಲು ಭಗವಂತ ಅನುಗ್ರಹಿಸಲಿ ಎಂದು ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆಶೀರ್ವದಿಸಿದರು.

ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು.ವಿಶ್ವನಾಥ್​ ಶೆಣೈ ಅವರು ತಮ್ಮ ಮನೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀಗಳ ಪಾದಪೂಜೆಯ ಬಳಿಕ ಹಮ್ಮಿಕೊಂಡಿದ್ದ ಡಾ. ಎಚ್​.ಎಸ್​. ಶೆಟ್ಟಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಸಮಾಜಕ್ಕೆ ದೊಡ್ಡ ಪಾಲು

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್​ ಟ್ರಸ್ಟ್​ ಸ್ಥಾಪಿಸಿ, ತಮ್ಮ ಗಳಿಕೆಯ ದೊಡ್ಡ ಪಾಲನ್ನು ಶಿಕ್ಷಣ ಮತ್ತು ಸಮಾಜಕ್ಕೆ ದಾನ ಮಾಡುತ್ತಿದ್ದಾರೆ. ಮೈಸೂರು ಮರ್ಕಂಟೈಲ್​ ಕಂಪನಿ ಲಿ.ನ ನಿರ್ದೇಶಕರಾದ ಅವರಿಗೆ ವೃತ್ತಿಯೊಂದಿಗೆ ಸಮಾಜ ಸೇವೆಯ ಪ್ರವೃತ್ತಿಯಲ್ಲಿ ತೊಡಗಿದ್ದಾರೆ. ದಾನಿಗಳಾದ ಶೆಣೈ ಹಾಗೂ ಶೆಟ್ಟರನ್ನು ಸಮ್ಮಾನಿಸುವ ವಿಶಿಷ್ಟ ಕಾರ್ಯಕ್ರಮವಿದು. ಈರ್ವರಿಂದಲೂ ಇನ್ನೂ ಹೆಚ್ಚು ಸಮಾಜ ಸೇವಾ ಕಾರ್ಯ ನಡೆಯಬೇಕಿದೆ. ಅವರಿಗೆ ದೇವರು ಹೆಚ್ಚಿನ ಆಯುರಾರೋಗ್ಯ ದಯಪಾಲಿಸಲಿ ಎಂದು ಶ್ರೀಗಳು ಹರಿಸಿದರು.

ಡಾ. ಎಚ್​. ಎಸ್​. ಶೆಟ್ಟಿ ಮಾತನಾಡಿ, ಬದುಕಿನಲ್ಲಿ ನಡೆದ ಘಟನೆಗಳನ್ನು ತಿಳಿಸಿದರು. ನಾಸ್ತಿಕನಾಗಿದ್ದ ತಾನು ಆಸ್ತಿಕನಾಗುವಲ್ಲಿ ಕಾರಣವಾದ ಸಂಗತಿಯನ್ನೂ ಸಭೆಯಲ್ಲಿ ವಿವರಿಸಿದರು.

ಯು.ವಿಶ್ವನಾಥ್​ ಶೆಣೈ ಸ್ವಾಗತಿಸಿದರು. ಪ್ರಭಾವತಿ ವಿ. ಶೆಣೈ ಉಪಸ್ಥಿತರಿದ್ದರು. ಮುರಲಿ ಕಡೆಕಾರ್​ ಸಮ್ಮಾನಿತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ರವಿರಾಜ್​ ಎಚ್​.ಪಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net