ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸಚಿವ ಕೆ.ಎನ್.ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ಯತ್ನ ಪ್ರಕರಣ ಈಗ ಮತ್ತೊಂದು ಮಗ್ಗಲು ಬದಲಿಸಿದೆ(Honey trap; CM Siddaramaiah, Mallikarjun Kharge have secret talks). ಪ್ರಕರಣದ ಅಂಗಳಕ್ಕೆ ನೇರವಾಗಿ ಕಾಂಗ್ರೆಸ್ ಹೈಕಮಾಂಡ್ ಪ್ರವೇಶಿಸಿದೆ.
ಪ್ರಕರಣದ ಸಂಬಂಧ ಸಿಬಿಐ ತನಿಖೆಯಾಗಲಿ ಎಂದು ಬಿಜೆಪಿ ಆಗ್ರಹಿಸಿದೆ. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ. ಈ ಬಗ್ಗೆ ಈಗಾಗಲೇ ಒಂದು ನಿರ್ಣಯಕ್ಕೆ ಬಂದಿದ್ದೇವೆ. ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.
ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕ್ಲೋಸ್ ಡೋರ್ ಮೀಟಿಂಗ್‌ನಲ್ಲಿ ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ರಾಜಣ್ಣ ಮೇಲೆ ಮಧು ಬಲೆ ಯತ್ನದ ಬಗ್ಗೆ ಭಾರೀ ಜಟಾಪಟಿ ನಡೆಯುತ್ತಿರುವ ಸಂದರ್ಭದಲ್ಲಿ ಮುಕ್ಕಾಲು ಗಂಟೆ ಕಾಲ ನಡೆದ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಖರ್ಗೆ ಭೇಟಿ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹನಿಟ್ರ್ಯಾಪ್ ಬಗ್ಗೆ ಚರ್ಚಿಸಿದ್ದಾರೆ. ಘಟನೆಯ ಎಲ್ಲ ವಿವರಗಳನ್ನು ಖರ್ಗೆ ಅವರಿಗೆ ವಿವರಿಸಿದ್ದಾರೆ.
ಯೋಗ ಕ್ಷೇಮ ವಿಚಾರಣೆ
ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಖರ್ಗೆ ಗರಂ?
ಸಿಎಂ ಜತೆ ಚರ್ಚೆಯ ಸಂದರ್ಭದಲ್ಲಿ ಹನಿಟ್ರ್ಯಾಪ್ ವಿಚಾರಕ್ಕೆ ರಾಜಣ್ಣ ಮೇಲೆ ಮಲ್ಲಿಕಾರ್ಜುನ ಖರ್ಗೆ ಗರಂ ಆಗಿದ್ದಾರೆ ಎನ್ನಲಾಗಿದೆ. ಈ ವಿಷಯವನ್ನು ಸದನದಲ್ಲಿ ಚರ್ಚೆ ಆಗಲು ಏಕೆ ಬಿಟ್ರಿ? ಇಂತಹ ವಿಷಯಗಳು ಪಕ್ಷಕ್ಕೆ ಮುಜುಗರ ತರುತ್ತವೆ. ವಿಪಕ್ಷಗಳ ಹೋರಾಟಕ್ಕೆ ನೀವೇ ಅಸ್ತ್ರಕೊಟ್ಟಿದ್ದಿರಾ ಎಂದು ಸಿಎಂ ಎದುರು ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದೂ ಮೂಲಗಳು ಹೇಳಿವೆ.
ಈ ನಡುವೆ ಸಿಎಂ ಸಿದ್ದರಾಮಯ್ಯ, ಹನಿಟ್ರ್ಯಾಪ್‌ಗೆ ಸಂಬಂಧಿಸಿದಂತೆ ಎಂಎಲ್ಸಿ ರಾಜೇಂದ್ರ ರಾಜಣ್ಣ ನೀಡಿದ ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
‘ಸಿಎಂ ಹಾಗೂ ಖರ್ಗೆಯವರು ಪ್ರತ್ಯೇಕವಾಗಿ ಚರ್ಚೆ ಮಾಡಿದ್ದಾರೆ, ಏನು ಎನ್ನುವುದು ಗೊತ್ತಿಲ್ಲ. ಇದೊಂದು ಸೌಜನ್ಯದ ಭೇಟಿಯಾಗಿತ್ತು. ಆದರೆ ರಾಜ್ಯ, ರಾಷ್ಟ್ರದ್ದು ಚರ್ಚೆಯಾಗಿದೆ’ ಎನ್ನುವ ಮೂಲಕ ಹನಿಟ್ರ್ಯಾಪ್ ಕುರಿತು ಚರ್ಚೆಯಾಗಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸಣ್ಣ ಸುಳಿವು ನೀಡಿದ್ದಾರೆ.
ನಾನು ಹೇಳಲು ಆಗುತ್ತಾ?
ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ನಮ್ಮ ಮನೆಗೆ ಬರುತ್ತೇನೆ ಅಂದರು. ಬೇಡ ಆರೋಗ್ಯ ವಿಚಾರಿಸಲು ನಾನೇ ಬರುತ್ತೇನೆ ಅಂದೆ. ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೇನೆ. ಸೌಜನ್ಯ ಭೇಟಿ ಅಷ್ಟೇ ಎಂದರು.
ಸರ್ಕಾರಕ್ಕೆ ಎರಡು ವರ್ಷ ತುಂಬಿದಕ್ಕೆ ಬೇರೆ ಪ್ಲಾನ್ ಏನಾದರೂ ಚರ್ಚೆಯಾಗಿದೆಯಾ ಎಂಬ ಪ್ರಶ್ನೆಗೆ, ಅವೆಲ್ಲ ಇಲ್ಲಿ ಚರ್ಚೆಯಾಗಲ್ಲ. ದೆಹಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ, ಅಲ್ಲಿ ಚರ್ಚೆ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಸಚಿವ ರಾಜಣ್ಣ ಹನಿಟ್ರ್ಯಾಪ್ ಬಗ್ಗೆ ನಾನು ಹೇಳಲು ಆಗುತ್ತಾ? ಇಲ್ಲಿನವರನ್ನು ಕೇಳಿ ಎಂದ ಖರ್ಗೆ
ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಲು ನಿರಾಕರಿಸಿದರು.
ಮುಖ್ಯಮಂತ್ರಿಯವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು. ಅವರನ್ನು ಯಾರು ಭೇಟಿ ಮಾಡಿದರು ಎಂಬುದರ ಬಗ್ಗೆ ನನ್ನನ್ನು ಏಕೆ ಕೇಳುತ್ತೀರಿ? ನನಗೆ ಸಂಬಂಧಿಸಿದ ವಿಚಾರಗಳೇನಾದರೂ ಇದ್ದರೆ ಆ ಬಗ್ಗೆ ಮಾತ್ರ ಪ್ರಶ್ನೆ ಕೇಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಜೇಂದ್ರ ರಾಜಣ್ಣ ಸಿಎಂ ಭೇಟಿಯಾಗಿರುವ ಬಗ್ಗೆ ಕೇಳಿದಾಗ, ನನಗೆ ಆ ವಿಚಾರವಾಗಿ ಏನನ್ನೂ ಕೇಳಬೇಡಿ. ಮುಖ್ಯಮಂತ್ರಿಗಳನ್ನು ಯಾರು ಬೇಕಾದರೂ ಭೇಟಿ ಮಾಡಿಕೊಳ್ಳಲಿ. ನನ್ನ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ನನ್ನನ್ನು ಕೇಳಿ. ಅವರು ಇವರನ್ನು ಭೇಟಿ ಮಾಡಿದರು, ಇವರು ಅವರನ್ನು ಭೇಟಿ ಮಾಡಿದರು ಎಂದು ನನ್ನನ್ನು ಯಾಕೆ ಕೇಳುತ್ತೀರಾ? ಮುಖ್ಯಮಂತ್ರಿಗಳು ಅಂದಮೇಲೆ ಎಲ್ಲ ಸಚಿವರು, ಶಾಸಕರು, ಸಂಸದರು, ಸಾರ್ವಜನಿಕರು ಭೇಟಿ ಮಾಡುವುದು ಸಹಜ. ನನ್ನನ್ನೂ ಅನೇಕರು ಭೇಟಿ ಮಾಡುತ್ತಾರೆ. ಇಂಥ ವಿಚಾರವಾಗಿ ಯಾವುದೇ ಪ್ರಶ್ನೆಗಳನ್ನು ನನಗೆ ಕೇಳಬೇಡಿ ಎಂದರು.
ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಸಚಿವರ ವಿರುದ್ಧ ಹೈಕಮಾಂಡ್ ಗರಂ ಆಗಿದೆಯಂತಲ್ಲಾ ಎಂಬ ಪ್ರಶ್ನೆಗೆ, ಇದೆಲ್ಲವೂ ಬೋಗಸ್, ಯಾರು ಗರಂ ಆಗಿದ್ದಾರೆ? ಸುಮ್ಮನೆ ಸುಳ್ಳು ಸುದ್ದಿಗಳನ್ನು ಸೃಷ್ಠಿ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷನಾಗಿ ನಿಮ್ಮ ಬಳಿ ಏನಾದರೂ ದಾಖಲೆ ಇದ್ದರೆ ಕೊಡಿ ಎಂದು ರಾಜಣ್ಣ ಅವರನ್ನು ಕೇಳಿದ್ದೇನೆ. ನನ್ನ ಬಳಿ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ. ಅವರು ನನ್ನ ಬಳಿ ಇನ್ನೂ ಏನೇನೂ ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದೆ ಹೇಳಲು ಆಗುವುದಿಲ್ಲ. ನಿಮ್ಮದು ಏನಾದರೂ ಇದ್ದರೆ ದೂರು ನೀಡಿ ಎಂದು ಹೇಳಿದ್ದೇನೆ. ನಾನು ಇದಕ್ಕಿಂತ ಇನ್ನೇನು ಹೇಳಲು ಸಾಧ್ಯ.
-ಡಿ.ಕೆ.ಶಿವಕುಮಾರ್, ಡಿಸಿಎಂ
ರಾಜಣ್ಣ ದೂರು ಕೊಡುವುದಾಗಿ ಹೇಳಿದ್ದಾರೆ. ಇನ್ನೂ ಕೊಟ್ಟಿಲ್ಲ. ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ. ಯಾವ ತನಿಖೆಗೆ ಕೊಡಬೇಕು ಎಂಬುದು ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು.
-ಡಾ.ಜಿ.ಪರಮೇಶ್ವರ, ಗೃಹ ಸಚಿವ.