

ಮಂಗಳೂರು: ನಗರೀಕರಣ, ಕೈಗಾರಿಕೀಕರಣ ಮತ್ತು ಅಭಿವೃದ್ಧಿಯ ಕುಂಟು ನೆಪ ಇಟ್ಟುಕೊಂಡು ನಮ್ಮ ಸುತ್ತಲಿನ ಮರ ಗಿಡಗಳನ್ನು ನಾಶ ಮಾಡಿ ಪರಿಸರವನ್ನು ಹಾಳುಮಾಡುತ್ತಿದ್ದೇವೆ. ಹಸಿರು ಇದ್ದರೆ ಮಾತ್ರ ಉಸಿರಾಡಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಪರಿಸರವಾದಿ, ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಸಕ್ರೀಯ ಸದಸ್ಯ ಮಾಧವ ಉಳ್ಳಾಲ ಹೇಳಿದರು.
ದ.ಕ ಜಿಲ್ಲಾ ಗೃಹರಕ್ಷಕದಳ ಮತ್ತು ದ.ಕ ಜಿಲ್ಲಾ ಪೌರರಕ್ಷಣಾ ಪಡೆಯ ವತಿಯಿಂದ ನಗರದ ಮೇರಿಹಿಲ್‌ನಲ್ಲಿರುವ ದ.ಕ. ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಗುರುವಾರದಂದು ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನೇರಳೆ, ಕದಂಬ, ಹಲಸು. ಬಾದಾಮಿ ಮುಂತಾದ ನೆರಳು ನೀಡುವ ಮತ್ತು ಹಣ್ಣಿನ ಗಿಡಗಳನ್ನು ಈ ಸಂದರ್ಭದಲ್ಲಿ ಕಛೇರಿಯ ಆವರಣದೊಳಗೆ ನೆಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ.ಮುರಲೀಮೋಹನ್ ಈ ಸಂದರ್ಭದಲ್ಲಿ ಮಾತನಾಡಿ, ಕಳೆದ 9 ವರ್ಷಗಳಿಂದ ನಿರಂತರವಾಗಿ ಗೃಹರಕ್ಷಕದಳದ ವತಿಯಿಂದ ರೆಡ್ ಕ್ರಾಸ್ ದಿನದಂದು ನಗರದೆಲ್ಲೆಡೆ ಗಿಡನೆಟ್ಟು ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ನೀಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಪ್ರತಿ ಗೃಹರಕ್ಷಕರಿಗೆ ಒಂದು ಗಿಡ ಎಂಬ ಧ್ಯೇಯವಾಕ್ಯದೊಂದಿಗೆ ಪರಿಸರ ಉಳಿಸಿ, ನಾಡು ಉಳಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದೆ ಎಂದರು.
ಪರಿಸರವಾದಿ ಕೃಷ್ಣಪ್ಪ, ರಾಮಚಂದ್ರ ಭಟ್, ಕಛೇರಿ ಅಧೀಕ್ಷಕ ಗೋಪಿನಾಥ್, ತರಬೇತುದಾರ ಮಹೇಶ್, ಮಂಗಳೂರು ಘಟಕದ ಜೀವನ್ ರಾಜ್, ಜ್ಞಾನೇಶ್, ನಿಶಾ, ಚಂದ್ರಶೇಖರ್, ಉಳ್ಳಾಲ ಘಟಕದ ಸುನಿಲ್, ಸಂತೋಷ್, ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.