

ಉಡುಪಿ: 76 ಬಡಗುಬೆಟ್ಟು ಗ್ರಾಮದ ಮಿಷನ್ ಕಾಂಪೌಂಡ್ ಪಿಡ್ಯೂಡಿ ಕ್ವಾಟ್ರೆಸ್ನಲ್ಲಿ ಶನಿವಾರ ರಾತ್ರಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ ಧಾರ್ ಜಿಲ್ಲೆಯ ನಿವಾಸಿಗಳಾದ ರಮೇಶ್ ಜವಾನ್ ಸಿಂಗ್(37), ಕಾಲಿಯಾ ಅಲಿಯಾಸ್ ಕಾಲು(25) ಬಂಧಿತರು. ಆರೋಪಿಗಳಿಂದ ಬೆಳ್ಳಿಯ ಆಭರಣಗಳಾದ ಕಾಲು ಗೆಜ್ಜೆ, ಸೊಂಟದ ನೇವಳ, ಕೈಬಳೆ, ಕಾಲುಂಗುರ, ಸೊಂಟದ ಪಟ್ಟಿ, ಬಟ್ಟಲು, ಕಡಗ ಮತ್ತು ಬ್ರಾಸ್ಲೈಟ್ ಸೇರಿ ಒಟ್ಟು 80,970 ರೂ. ಮೌಲ್ಯದ ಒಟ್ಟು 681.830 ಮಿಲಿ ಗ್ರಾಂನ ಬೆಳ್ಳಿಯ ಸೊತ್ತು, 4,250 ರೂ. ಮೌಲ್ಯದ 470 ಮಿಲಿಗ್ರಾಂ ಚಿನ್ನ ಹಾಗೂ 1700 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಸರ್ಕಾರಿ ವಸತಿ ಗೃಹದ ಸೌರ್ಪಣಿಕ ಬಿ ಬ್ಲಾಕ್ನಲ್ಲಿದ್ದ ಮನೆಗೆ ನುಗ್ಗಿದ್ದ ಕಳ್ಳರು 40 ಗ್ರಾಂ ತೂಕದ ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆ- , 20 ಗ್ರಾಂ ತೂಕದ ಒಂದು ಜೊತೆ ಬೆಳ್ಳಿಯ ಕಾಲುಗೆಜ್ಜೆ-, 30 ಗ್ರಾಂ ತೂಕದ ಒಂದು ಜೊತೆ ಬೆಳ್ಳಿಯ ಸೊಂಟದ ನೇವಳ-, 20 ಗ್ರಾಂನ ಒಂದು ಜೊತೆ ಬೆಳ್ಳಿಯ ಕೈಬಳೆ- ಸೇರಿ 12,000 - ರೂ. ಮೌಲ್ಯದ ಬೆಳ್ಳಿ ಹಾಗೂ 1,700 ನಗದು ಹಣ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ರಜಾ ದಿನಗಳಲ್ಲಿ ಕಳ್ಳತನ
ಆರೋಪಿಗಳು ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ 3 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಹಾಗೂ ಸಹಚರರೊಂದಿಗೆ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳವು ಮಾಡಿರುವುದರ ಬಗ್ಗೆ ತನಿಖೆ ವೇಳೆ ಮಾಹಿತಿ ಲಭಿಸಿದೆ. ರಮೇಶ್ ವಿರುದ್ಧ ಈಗಾಗಲೇ ಬೇರೆ ರಾಜ್ಯದಲ್ಲಿ 11 ಕಳ್ಳತನ ಪ್ರಕರಣ ಮತ್ತು ಕಾಲಿಯಾ ಮೇಲೆ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿದೆ. ಆರೋಪಿಗಳು ಶನಿವಾರ ಹಾಗೂ ಭಾನುವಾರದ ರಜಾ ದಿನಗಳಲ್ಲೇ ಕಳ್ಳತನ ಮಾಡುವ ಚಾಳಿ ಉಳ್ಳವರಾಗಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.