ಚಳಿಗಾಲದ ಶೀತಬಾಧೆಗೆ ಮನೆಯ ಸುತ್ತಮುತ್ತಲೇ ಇವೆ ಔಷಧ

ಚಳಿಗಾಲದ ಶೀತ ಬಾಧೆ
ಚಳಿಗಾಲದ ಶೀತ ಬಾಧೆ
Published on

ಬೆಂಗಳೂರು: ಇದು ಚಳಿಗಾಲ. ಕೊರೆಯುವ ಚಳಿ ಮೈಮುತ್ತುತ್ತಿದೆ. ಬಿಸಿಲು ಕಂಡರೆ ಸಾಕು ಅಲ್ಲೇ ನಿಂತುಬಿಡೋಣ ಎಂಬಷ್ಟು ಶೀತ ಕೆಲದಿನಗಳಿಂದ ಬಾಧಿಸುತ್ತಿದೆ. ಅಷ್ಟೇ ಅಲ್ಲ, ನಮ್ಮ ಆರೋಗ್ಯದ ಸುಲಲಿತ ದಿನಚರಿಗೂ ಈ ವಾತಾವರಣ ಅಡ್ಡಿ ಮಾಡುತ್ತಿದೆ. ಹೀಗಾಗಿ ಚಳಿ ಹೆಚ್ಚಾಗುತ್ತಿದ್ದಂತೆ ಎಲ್ಲರ ಸಮಸ್ಯೆ ಒಂದೇ ಎಂಬಂತಾಗುತ್ತಿದೆ. ಏಕೆಂದರೆ ಎಲ್ಲರೂ ಸೀನುತ್ತಾ, ಮೂಗಿನಿಂದ ನೀರು ಹರಿಸುತ್ತಾ, ಕಫ-ಕೆಮ್ಮು ಎನ್ನುತ್ತಿದ್ದಾರೆ. ಹಾಗಾಗಿ ಇಂದು ನಾವು ಈ ಶೀತದ ತೊಂದರೆಗಳನ್ನು ನಿವಾರಿಸಿ ಕೊಳ್ಳುವ ಬಗ್ಗೆ ತಿಳಿದುಕೊಳ್ಳೋಣ.

ಕಾಲಕ್ಕೆ ತಕ್ಕ ಹಾಗೆ ನಮ್ಮ ದೇಹದಲ್ಲಿಯೂ ಏರುಪೇರುಗಳು ಉಂಟಾಗು ವುದು ಅತ್ಯಂತ ಸಹಜ. ಆದರೆ ಅವು ನಮಗೆ ತೊಂದರೆ ಕೊಡದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ನಮ್ಮ ಕೆಲಸವೇ ಆಗಿದೆ. ಚಳಿಗಾಲದಲ್ಲಿ ಹೆಚ್ಚುವ ಕಪದೋಷವನ್ನು ನಿಯಂತ್ರಣದಲ್ಲಿಡಲು ಕೆಲವು ನಿಯಮಗಳನ್ನು ನಾವು ಪಾಲಿಸಬೇಕು. ಮೊದಲನೆಯದಾಗಿ ನಮ್ಮ ಆಹಾರ, ದಿನಚರಿಗಳಲ್ಲಿ ನಾವು ಸ್ವಲ್ಪ ಬೆಚ್ಚನೆಯ ಪದಾರ್ಥಗಳನ್ನು ಸೇವಿಸಬೇಕು. ಕರಿದ ಪದಾರ್ಥಗಳು, ತಣ್ಣನೆಯ ಪದಾರ್ಥಗಳನ್ನು ಸೇವಿಸಿದಾಗ ಸಹಜವಾಗಿ ಕಫದೋಷವು ಹೆಚ್ಚುತ್ತದೆ. ಹಗಲು ನಿದ್ದೆ ಮಾಡುವುದು ಕೂಡ ಈ ದೋಷ ಹೆಚ್ಚಾಗಲು ಕಾರಣವಾಗುತ್ತದೆ.

ಆದ್ದರಿಂದ ಈ ಕಾಲದಲ್ಲಿ ಸಹಜವಾಗಿ ಹೆಚ್ಚಾಗುವ ಕಫ ದೋಷವನ್ನು ತಡೆಯಲು ಸರಿಯಾಗಿ ಪ್ರಾಣಾಯಾಮ, ವ್ಯಾಯಾಮ, ಸೂರ್ಯಸ್ನಾನ, ನಸ್ಯಕರ್ಮಗಳನ್ನು ಮಾಡಿಕೊಳ್ಳ ಬೇಕು. ನಮ್ಮ ಆಹಾರದಲ್ಲಿ ಶುಂಠಿ, ಅರಿಶಿನ, ಕಾಳುಮೆಣಸು, ಬೆಳ್ಳುಳ್ಳಿಯಂತಹ ಪದಾರ್ಥಗಳನ್ನು ಹೆಚ್ಚಾಗಿ ಬಳಸಿದರೆ ಕಫದೋಷವು ಹತೋಟಿಯಲ್ಲಿರಲು ಸಾಧ್ಯವಾಗುತ್ತದೆ. ಗ್ರಂಥಿಗೆ ಅಂಗಡಿಗಳಲ್ಲಿ ಸಿಗುವ ಗುಗ್ಗುಲು ಅನ್ನು ತಂದು ಅದಕ್ಕೆ ಸ್ವಲ್ಪ ಅರಿಶಿಣ ಹಾಕಿ ಈ ಮಿಶ್ರಣವನ್ನು ಕೆಂಡದಲ್ಲಿ ಹಾಕಿ ಕೋಣೆಯಲ್ಲಿ ಇಟ್ಟರೆ ಅನುಕೂಲವಾಗುತ್ತದೆ. ಅರಿಶಿಣದ ಹೊಗೆಯನ್ನು ಒಂದರ್ಧ ನಿಮಿಷ ತೆಗೆದುಕೊಂಡರೆ ನೆಗಡಿಯಾಗುವುದನ್ನು ತಪ್ಪಿಸಬಹುದು.

ಚಳಿಗಾಲಕ್ಕೆ ಮನೆಮದ್ದು: ಚಳಿಗಾಲದಲ್ಲಿ ನೆಗಡಿಯಾಗಿದ್ದರೆ ಮಾಡಬಹುದಾದ ಕೆಲವು ಮನೆಮದ್ದುಗಳ ಬಗ್ಗೆ ಈಗ ನೋಡೋಣ. ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ರಸ ತೆಗೆಯಿರಿ. ನಂತರ ಒಂದು ಚಮಚದಷ್ಟು ರಸಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಹಿಪ್ಪಲಿ ಪುಡಿಯನ್ನು ಅಥವಾ ಕಾಳು ಮೆಣಸಿನ ಪುಡಿಯನ್ನು ಬೆರೆಸಬೇಕು. ಈ ಮದ್ದನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ನೆಗಡಿ ಮತ್ತು ಕಫ ಕಡಿಮೆಯಾಗುತ್ತವೆ. ಕೆಲವರಿಗೆ ಚಳಿಗಾಲ ತುಂಬ ತೊಂದರೆ ಕೊಡುತ್ತದೆ. ಪದೇ ಪದೇ ಅತಿಯಾದ ಶೀತದಿಂದ ಅವರು ಬಳಲುತ್ತಿರುತ್ತಾರೆ. ಅಂಥವರು ಸ್ವಲ್ಪ ತುಳಸಿ ಎಲೆಗಳನ್ನು ತಂದು ಅದಕ್ಕೆ ಸ್ವಲ್ಪ ನೀರು ಹಾಕಿ ಅದರ ರಸ ತೆಗೆಯಬೇಕು. ಆ ರಸಕ್ಕೆ ಮೊದಲು ಹೇಳಿದ ಪ್ರಮಾಣದಲ್ಲಿಯೇ ಜೇನುತುಪ್ಪ ಮತ್ತು ಹಿಪ್ಪಲಿ ಕೂಡ ಹಾಕಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಅತಿಯಾದ ಶೀತ ಹತೋಟಿಗೆ ಬರುತ್ತದೆ. 

ಏಕೆಂದರೆ ತುಳಸಿಯಲ್ಲಿ ಉಷ್ಣ ಗುಣ ಮತ್ತು ಕಫವನ್ನು ನಿವಾರಿಸುವ ಶಕ್ತಿ ಹೆಚ್ಚಿರುವ ಕಾರಣದಿಂದ ಅದು ಇಂತಹ ಸಮಯದಲ್ಲಿ ಅತ್ಯಂತ ಅನುಕೂಲಕರವಾದದ್ದು. ಆದರೆ ತುಂಬಾ ದಿನಗಳ ಕಾಲ ವೈದ್ಯರ ಸಲಹೆ ಇಲ್ಲದೆ ಈ ಮನೆಮದ್ದನ್ನು ಮುಂದುವರಿಸುವುದು ಸರಿಯಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕಫಯುಕ್ತ ಕೆಮ್ಮು ಇದ್ದರೆ...: ಕಫ ಕಟ್ಟಿಕೊಂಡು ಕಫಯುಕ್ತ ಕೆಮ್ಮು ಬರುತ್ತಿದ್ದರೆ ದಿನಕ್ಕೆ ಮೂರು ಬಾರಿ ಆಡುಮುಟ್ಟದ ಸೊಪ್ಪಿನ ರಸ ತೆಗೆದು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಸೇವಿಸಿದರೆ ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದು ಸಿಗದೇ ಹೋದರೆ ದೊಡ್ಡಪತ್ರೆಯ ರಸವನ್ನು ಕೂಡ ಬಳಸಬಹುದು. ಆದರೆ ಆಡುಮುಟ್ಟದ ಸೊಪ್ಪಿನ ರಸ ಹೆಚ್ಚು ಅನುಕೂಲಕರ.

ಅರ್ಧ ಚಮಚ ಒಣಶುಂಠಿಯ ಪುಡಿ, ಒಂದು ಚಮಚ ಅಣಲೆಕಾಯಿಯ ಪುಡಿ ತೆಗೆದುಕೊಂಡು ಈ ಮಿಶ್ರಣಕ್ಕೆ ಒಂದು ಲೋಟ ನೀರು ಹಾಕಿ ಕಾಯಿಸಬೇಕು. ಅದನ್ನು ಕಾಲು ಲೋಟಕ್ಕೆ ಬತ್ತಿಸಬೇಕು. ಈ ಔಷಧವನ್ನು ಸಂಜೆಯ ಸಮಯದಲ್ಲಿ ಪ್ರತಿದಿನ ಕುಡಿಯುವುದರಿಂದ ಶೀತ, ಕಫ, ಕೆಮ್ಮು, ಜ್ವರ ಮತ್ತು ವೈರಸ್ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು. ಜಲನೇತಿ, ಸೂತ್ರನೇತಿ, ಮಣ್ಣಿನ ಚಿಕಿತ್ಸೆ, ಸೂರ್ಯಸ್ನಾನ, ಎಣ್ಣೆಯ ಮಸಾಜ್, ಉಗಿ ಚಿಕಿತ್ಸೆ ಮುಂತಾದ ಪ್ರಕೃತಿ ಚಿಕಿತ್ಸೆಗಳನ್ನು ತೆಗೆದುಕೊಳ್ಳಲು ಇದು ಸಕಾಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net