ಮಾಂಸಾಹಾರ ತಿನ್ನದಿದ್ದರೂ ಪರವಾಗಿಲ್ಲ.. ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಈ ಪುಟ್ಟ ಬೀಜಗಳಲ್ಲಿದೆ! | Healthy Seeds

Healthy Seeds
Healthy Seeds
Published on
ಬೆಂಗಳೂರು: ಸ್ನಾಯುಗಳ ಬೆಳವಣಿಗೆ, ಜೀವಕೋಶಗಳ ದುರಸ್ತಿ ಮತ್ತು ದೇಹಕ್ಕೆ ಶಕ್ತಿ ನೀಡಲು ಪ್ರೋಟೀನ್(Healthy Seeds) ಅತ್ಯಗತ್ಯ. ಸಾಮಾನ್ಯವಾಗಿ ಪ್ರೋಟೀನ್ ಎಂದರೆ ಕೇವಲ ಮಾಂಸ ಅಥವಾ ಮೊಟ್ಟೆಯಲ್ಲಿ ಮಾತ್ರ ಇರುತ್ತದೆ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ನಮ್ಮ ಅಡುಗೆಮನೆಯಲ್ಲಿರುವ ಕೆಲವು ಪುಟ್ಟ ಬೀಜಗಳು ಒಂದು ಮೊಟ್ಟೆಗಿಂತಲೂ ಹೆಚ್ಚಿನ ಪ್ರೋಟೀನ್ ನೀಡಬಲ್ಲವು ಎಂದರೆ ನೀವು ನಂಬಲೇಬೇಕು!
ಹೌದು,ಸಸ್ಯಾಹಾರಿಗಳಿಗೆ ಹಾಗೂ ಜಿಮ್‌ಗೆ ಹೋಗುವವರಿಗೆ ಈ ಬೀಜಗಳು ಅತ್ಯುತ್ತಮ ಪೌಷ್ಟಿಕಾಂಶದ ಮೂಲಗಳಾಗಿವೆ. ಅಂತಹ ಪ್ರಮುಖ ಬೀಜಗಳ ಮಾಹಿತಿ ಇಲ್ಲಿದೆ.
1. ಸೆಣಬಿನ ಬೀಜಗಳು (Hemp Seeds)
ನೋಡಲು ಚಿಕ್ಕದಾದರೂ ಪೋಷಕಾಂಶಗಳ ಗಣಿ ಈ ಸೆಣಬಿನ ಬೀಜಗಳು. ಕೇವಲ 3 ಚಮಚ ಬೀಜಗಳಲ್ಲಿ ಸುಮಾರು 10 ಗ್ರಾಂ ಪ್ರೋಟೀನ್ ಇರುತ್ತದೆ. ವಿಶೇಷವೆಂದರೆ, ದೇಹಕ್ಕೆ ಅಗತ್ಯವಿರುವ ಎಲ್ಲಾ 9 ಅಮೈನೋ ಆಮ್ಲಗಳು ಇದರಲ್ಲಿವೆ.
ಹೇಗೆ ಬಳಸಬಹುದು?: ಸಲಾಡ್, ಸ್ಮೂಥಿ ಅಥವಾ ಓಟ್‌ಮೀಲ್‌ಗಳ ಮೇಲೆ ಸಿಂಪಡಿಸಿ ಸೇವಿಸಬಹುದು. ಇದು ಒಮೆಗಾ-3 ಕೊಬ್ಬಿನಾಮ್ಲವನ್ನೂ ಒಳಗೊಂಡಿದೆ.
2. ಕುಂಬಳಕಾಯಿ ಬೀಜಗಳು (Pumpkin Seeds)
ಕುಂಬಳಕಾಯಿ ಬೀಜಗಳು ಸಸ್ಯ ಆಧಾರಿತ ಪ್ರೋಟೀನ್‌ನ ಅತ್ಯುತ್ತಮ ಮೂಲ. 28 ಗ್ರಾಂ ಬೀಜ ಸೇವನೆಯಿಂದ 7 ಗ್ರಾಂ ಪ್ರೋಟೀನ್ ಸಿಗುತ್ತದೆ. ಇದು ಒಂದು ಮೊಟ್ಟೆಯ ಪ್ರೋಟೀನ್ ಅಂಶಕ್ಕೆ (6-7 ಗ್ರಾಂ) ಸಮಾನವಾಗಿದೆ.
ಬಳಕೆ: ಇದನ್ನು ಲಘು ತಿಂಡಿಯಾಗಿ ಅಥವಾ ಸೂಪ್‌ಗಳ ಜೊತೆ ಸೇವಿಸಬಹುದು. ಇದರಲ್ಲಿರುವ ಸತು (Zinc) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
3. ಸೂರ್ಯಕಾಂತಿ ಬೀಜಗಳು (Sunflower Seeds)
ಸೂರ್ಯಕಾಂತಿ ಬೀಜಗಳು ವಿಟಮಿನ್ ಇ ಮತ್ತು ಮೆಗ್ನಿಸಿಯಮ್‌ನಿಂದ ಸಮೃದ್ಧವಾಗಿವೆ. 28 ಗ್ರಾಂ ಬೀಜಗಳಲ್ಲಿ ಸುಮಾರು 6 ಗ್ರಾಂ ಪ್ರೋಟೀನ್ ಲಭ್ಯವಿದ್ದು, ಇದು ಜೀವಕೋಶಗಳ ರಕ್ಷಣೆಗೆ ಸಹಕಾರಿ.
ಬಳಕೆ: ಇವುಗಳನ್ನು ಹಸಿಯಾಗಿ ಅಥವಾ ಲಘುವಾಗಿ ಹುರಿದು ತಿನ್ನಲು ತುಂಬಾ ರುಚಿಯಾಗಿರುತ್ತವೆ.
ಬೀಜಗಳ ಸೇವನೆಯಿಂದಾಗುವ ಲಾಭಗಳು!
ಮೂಳೆಗಳ ಬಲವರ್ಧನೆ: ಹೆಚ್ಚಿನ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.
ಸ್ನಾಯುಗಳ ನಿರ್ಮಾಣ: ಜಿಮ್ ಪ್ರೇಮಿಗಳಿಗೆ ಸ್ನಾಯುಗಳ ಬೆಳವಣಿಗೆಗೆ ಇದು ನೈಸರ್ಗಿಕ ಸಪ್ಲಿಮೆಂಟ್.
ಹೃದಯದ ಆರೋಗ್ಯ: ಇದರಲ್ಲಿರುವ ಆರೋಗ್ಯಕರ ಕೊಬ್ಬು ಹೃದಯದ ಕಾಯಿಲೆಗಳನ್ನು ದೂರವಿಡುತ್ತದೆ,(ಏಜೆನ್ಸೀಸ್​).
ಸೂಚನೆ: ಯಾವುದೇ ಆಹಾರ ಪದ್ಧತಿಯನ್ನು ಬದಲಿಸುವ ಮೊದಲು ತಜ್ಞ ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆಯುವುದು ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net