ಗೃಹರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರ ಸಮಾರೋಪ

mng--19 April Home guard
Published on

ಮಂಗಳೂರು: ಗೃಹರಕ್ಷಕದಳದ 10 ದಿನಗಳ ವಾರ್ಷಿಕ ಮೂಲ ತರಬೇತಿ ಶಿಬಿರ ಬುಧವಾರ ನಂತೂರು ಶ್ರೀ ಭಾರತೀ ಕಾಲೇಜಿನಲ್ಲಿ ಸಮಾರೋಪಗೊಂಡಿತು.
ಡಿಸಿಪಿ ಬಿ.ಪಿ.ದಿನೇಶ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು. ಗೃಹರಕ್ಷಕರಿಗೆ ಖಾಕಿ ಧರಿಸುವ ಅವಕಾಶ ಲಭಿಸಿದ್ದು, ಯಾವುದೇ ಕಾರಣಕ್ಕೂ ಚ್ಯುತಿ ಬಾರದಂತೆ ಗೌರವವನ್ನು ಕಾಯ್ದುಕೊಳ್ಳಬೇಕು. ಸಮಾಜ ಸೇವೆಗೊಂದು ಉತ್ತಮ ಅವಕಾಶವಾಗಿದೆ ಎಂದರು.


ಇನ್ನೋರ್ವ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ.ಕಿಶನ್ ರಾವ್ ಮಾತನಾಡಿ, ಗೃಹರಕ್ಷಕದಳದಲ್ಲಿ ಜಿಲ್ಲಾ ಸಮಾದೇಷ್ಟರ ನೇತೃತ್ವದಲ್ಲಿ ಸಾಂಸ್ಕೃತಿಕ, ಕ್ರೀಡೆ, ಸಮಾಜಸೇವೆ ಎಲ್ಲವೂ ನಡೆಯುತ್ತಿರುವುದು ಸಂತಸದ ವಿಚಾರ. ಇನ್ನಷ್ಟು ಮಂದಿ ಇಲಾಖೆಗೆ ಸೇರುವಂತಾಗಲಿ ಎಂದರು.


ಶ್ರೀ ಭಾರತೀ ಸಮೂಹ ಸಂಸ್ಥೆಯ ಕೋಶಾಧಿಕಾರಿ ಉದಯ ಶಂಕರ್ ನಿರ್ಪಾಜೆ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಗೃಹರಕ್ಷಕರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಜೊತೆ ಕೆಲಸ ಮಾಡುವ ಹೊಣೆಗಾರಿಕೆ ಇದೆ. ಪ್ರವಾಹರಕ್ಷಣೆ, ಚುನಾವಣೆ, ಜಾತ್ರೆ ಬಂದೋಬಸ್ತ್ಗಳಿಗೂ ಗೃಹರಕ್ಷಕರು ಬೇಕು. ಹೀಗೆ ಎಲ್ಲಾ ಕಡೆ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುವ ಇಲಾಖೆ ಆಗಿದೆ. ನಿಮ್ಮ ಮೇಲೆ ಇರುವ ಗೌರವವನ್ನು ಉಳಿಸಿಕೊಂಡು ನಿಷ್ಕಾಮ ಸೇವೆಯೇ ಪರಮಗುರಿ ಎನ್ನುವ ಉದ್ದೇಶದೊಂದಿಗೆ ಕೆಲಸಮಾಡಬೇಕು ಎಂದರು.


ಈ ಸಂದರ್ಭದಲ್ಲಿ 10 ದಿನಗಳ ವಾರ್ಷಿಕ ತರಬೇತಿ ಶಿಬಿರ ನಡೆಸಿಕೊಟ್ಟ ಪೌರರಕ್ಷಣಾ ಅಕಾಡೆಮಿ ಬೆಂಗಳೂರು ಇಲ್ಲಿಯ ಬೋಧಕ ಚಂದನ್ ಅವರನ್ನು ಸನ್ಮಾನಿಸಲಾಯಿತು. ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಹೊಸದಾಗಿ ನೋಂದಾಯಿತ ಮಂಗಳೂರು ಘಟಕದ ಗೃಹರಕ್ಷಕ ಬಸವರಾಜ್ ಮತ್ತು ಸುರತ್ಕಲ್ ಘಟಕದ ರಾಣಿ ಅನಿಸಿಕೆಗಳನ್ನು ತಿಳಿಸಿದರು.


ದಕ್ಷಿಣ ಕನ್ನಡ ಜಿಲ್ಲಾ ಉಪ ಸಮಾದೇಷ್ಟ ರಮೇಶ್ ಸ್ವಾಗತಿಸಿದರು. ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು. ಬೋಧಕ ಚಂದನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್‌ಶೇರಾ ವಂದಿಸಿದರು. ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್, ಗೃಹರಕ್ಷಕರಾದ ಸುನಿಲ್, ಸುನಿಲ್ ಪೂಜಾರಿ, ರೇವತಿ, ನಿರುಪಮ, ರಂಜಿತ್, ಕನಕಪ್ಪ, ದಿವಾಕರ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net