

ಕಾಸರಗೋಡು: ಜಿಲ್ಲೆಯ ಕುಂಡಂಗುಯಿ ನೆಟ್ಟುಂಬಲ್‌ನಲ್ಲಿ ವಾಸಿಸುವ 28ರ ಹರೆಯದ ಮಹಿಳೆ ಮನೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ‘ಕನಿವ್ 108’ ಆ್ಯಂಬುಲೆನ್ಸ್ ಸಹಾಯದಿಂದ ಮಗು ಮತ್ತು ಬಾಣಂತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ.
ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನದ ಮಧ್ಯೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಕುಟುಂಬ ಸದಸ್ಯರು ತಕ್ಷಣ 108 ಆಂಬುಲೆನ್ಸ್ ಸೇವೆಗಾಗಿ ನಿಯಂತ್ರಣ ಕೊಠಡಿಗೆ ಕರೆಮಾಡಿದ ಹಿನ್ನೆಲೆಯಲ್ಲಿ ಬೇಡಡ್ಕ ತಾಲೂಕು ಆಸ್ಪತ್ರೆಯಿಂದ ಆಂಬುಲೆನ್ಸ್ ವಾಹನ ಕಳುಹಿಸಿಕೊಡಲಾಗಿದ್ದು, ತಕ್ಷಣದ ಕಾರ್ಯಾಚರಣೆಯಿಂದ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಬುಲೆನ್ಸ್ ಪೈಲಟ್ ಸನೀಶ್ ಪಿ.ಪಿ. ಮತ್ತು ತುರ್ತು ವೈದ್ಯಕೀಯ ತಂತ್ರಜ್ಞ ಶೈನ್ ಪಿ.ಜೋಸ್ ಮಗು ಮತ್ತು ಬಾಣಂತಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ. ಬೇಡಡ್ಕ ತಾಲೂಕು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಂತರಾಗಿರುವುದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.