

ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ
ಕಾಶಿಯಿಂದಲೇ ತೀರ್ಥ ಹರಿದುಬರುತ್ತಿದೆ ಎಂಬ ನಂಬಿಕೆಯಿರುವ ಪಾರ್ಪಿಕಲ್ಲಿನ ಅಮಾವಾಸ್ಯೆ ಗುಂಡಿಯಲ್ಲಿ ನೂರಾರು ವರ್ಷಗಳಿಂದ ತೀರ್ಥಸ್ನಾನ ನಡೆಯುತ್ತಾ ಬಂದಿದೆ. ಈ ಬಾರಿ ಏ.27ರಂದು ನಡೆಯಲಿದೆ. ಕೊಕ್ಕಡ, ಪಟ್ರಮೆ, ನಿಡ್ಲೆ, ಅರಸಿನಮಕ್ಕಿ, ಕೌಕ್ರಾಡಿ, ಶಿಶಿಲ, ಶಿಬಾಜೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನೂರಾರು ಭಕ್ತರು ಈ ಪವಿತ್ರ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ಸರ್ವವ್ಯಾಧಿಗಳು ನಿವಾರಣೆಯಾಗುತ್ತದೆ ಎಂಬುದು ಜನರ ನಂಬಿಕೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಧರ್ಮಸ್ಥಳಕ್ಕೆ ಹೋಗುವ ಮಾರ್ಗ ಮಧ್ಯೆ ನಿಡ್ಲೆ ಗ್ರಾಮದ ಪಾರ್ಪಿಕಲ್‌ನಲ್ಲಿ ಕಪಿಲೆ ನದಿ ಹರಿಯುತ್ತಾಳೆ. ಕಪಿಲೆಯ ಒಡಲಲ್ಲಿ ತೀರ್ಥ ಸ್ನಾನದ ಅಮಾವಾಸ್ಯೆ ಗುಂಡಿಯಿದೆ. ಬಾವಿ ಆಕಾರದಲ್ಲಿ ಕಾಣುವ ಈ ಗುಂಡಿಯ ಆಳ ನಿಗೂಢ. ನದಿ ಪ್ರದೇಶದಲ್ಲಿ ಕಪಿಲೆ ಹರಿದು ಜಲಪಾತದಂತೆ ಬೀಳುತ್ತದೆ. ಆನೆಕಲ್ಲು, ಕುದುರೆ ಕಲ್ಲು ಎಂಬ ಹೆಸರಿನಿಂದ ಕರೆಯಲ್ಪಡುವ ಕಲ್ಲುಗಳು ಇವೆ. ಇಲ್ಲಿ ಜಾತಿ, ಲಿಂಗ, ಭೇದವಿಲ್ಲದೆ ತೀರ್ಥಸ್ನಾನ ಮಾಡ್ತುತಾರೆ.
ಪಾಳಂದೆ ಮನೆತನದಿಂದ ಗಂಗಾಪೂಜೆ
ಮೇಘ ಮಾಸದ ಅಮಾವಾಸ್ಯೆ ದಿನ ಈ ಪ್ರದೇಶದಲ್ಲಿ ಪಾಳಂದೆ ಮನೆತನದವರು ಗಂಗಾಪೂಜೆ ಮಾಡಿ ಅಣತಿ ದೂರದ ಕೆರೆಕಂಡ ಹಾಗೂ ಸಣ್ಣಕಂಡ ಬಳಿ ಜನಾರ್ದನ ಗೌಡರ ಜಾಗದಲ್ಲಿರುವ ನೆತ್ತರ ಮುಗುಳಿಗೆ ಮೊದಲ ತೀರ್ಥಸ್ನಾನ ಅಭಿಷೇಕದ ರೂಪದಲ್ಲಿ ಅರ್ಪಿಸಲಾಗುತ್ತದೆ. ಬಳಿಕ ಭಕ್ತರು ಅಮಾವಾಸ್ಯೆ ಗುಂಡಿಯಲ್ಲಿ ಸ್ನಾನ ಮಾಡುತ್ತಾರೆ. ಮನೆಗಳಿಗೂ ತೀರ್ಥ ಕೊಂಡೊಯ್ಯುತ್ತಾರೆ. ಹಲವು ವರ್ಷಗಳಿಂದ ಅಂತರ ದಿನೇಶ್ ಭಟ್ಟ ಇಲ್ಲಿ ಸೇರುವ ಭಕ್ತರಿಗೆ ಪಾನಕದ ವ್ಯವಸ್ಥೆ ಮಾಡಿಕೊಂಡು ಚ್ಟ ಬಂದಿದ್ದಾರೆ.
ಕೊಕ್ಕಡ ದೇವರಿಗೆ ಅಭಿಷೇಕ
ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳದ ಅರ್ಚಕರು ಗಂಗಾ ಪೂಜೆ ನೆರವೇರಿಸಿ ತೀರ್ಥವನ್ನು ಗಡಿಗೆಯಲ್ಲಿ ತುಂಬಿ ಕಾಲ್ನಡಿಗೆಯಲ್ಲಿ ದೇವಳಕ್ಕೆ ತರುತ್ತಾರೆ. ವೈದ್ಯನಾಥೇಶ್ವರನಿಗೆ ಅಭಿಷೇಕ ಮಾಡುತ್ತಾರೆ. ತೀರ್ಥವಾಗಿ ಭಕ್ತರಿಗೆ ನೀಡುತ್ತಾರೆ. ಈ ದೇವಳಕ್ಕೆ ತೀರ್ಥವನ್ನು ತೆಗೆದ ಬಳಿಕ ಅಮಾವಾಸ್ಯೆ ಗುಂಡಿಯಲ್ಲಿ ಸ್ನಾನ ಮಾಡುಬಾರದು ಎಂಬ ಪದ್ಧತಿ ಇದೆ. ವರ್ಷಕ್ಕೆ ಒಂದೇ ಬಾರಿ ತೀರ್ಥಸ್ನಾನಕ್ಕೆ ಅವಕಾಶವಿರುತ್ತದೆ. ತೀರ್ಥಸ್ನಾನದ ಆರಂಭದಲ್ಲಿ ಗಂಗಾ ಪೂಜೆ ಬಳಿಕ ನೆತ್ತರ ಮುಗುಳಿಗೆ ಅಭಿಷೇಕವಾದರೆ, ಕೊನೆಯಲ್ಲಿ ಗಂಗಾ ಪೂಜೆ ಬಳಿಕ ಕೊಕ್ಕಡ ದೇವರಿಗೆ ಅಭಿಷೇಕಕ್ಕೆ ನೀರು ತೆಗೆಯಲಾಗುತ್ತದೆ. ದಶಕಗಳ ಹಿಂದೆ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಡೆಯುತ್ತಿದ್ದ ತೀರ್ಥ ಸ್ನಾನ ಪ್ರಸಕ್ತ ಮುಂಜಾನೆ 6ರಿಂದ 10.30ರವರೆಗೆ ನಡೆಯುತ್ತದೆ.
ಅನಾದಿಕಾಲದಿಂದಲೂ ನಮ್ಮ ಹಿರಿಯರು ತೀರ್ಥಸ್ನಾನ ಮಾಡಿಕೊಂಡು ಬರುತ್ತಿದ್ದು, ಆ ಪರಂಪರೆ ಮುಂದುವರಿಸಿಕೊಂಡು ಬಂದಿದ್ದೇವೆ. ನಮ್ಮ ಮುಂದಿನ ಪೀಳಿಗೆ ಇದರಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದು ನಮಗೆ ಸಂತಸ ತಂದಿದೆ. ನರಸಿಂಹ ಪಾಳಂದೆ ಮತ್ತು ಜಯರಾಮ ಪಾಳಂದೆ, ಪಾಳಂದೆ ಕುಟುಂಬಸ್ಥರು, ಪಾರ್ಪಿಕಲ್ಲು