

ರೋಣ: ಹೊಳೆ ಮಣ್ಣೂರು ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಅಡಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನಿಮಿತ್ತ ಮಕ್ಕಳಿಂದ ತಯಾರಿಸಿದ ವಿಜ್ಞಾನ ಮಾದರಿಗಳು ಹಾಗೂ ನಕ್ಷೆಗಳ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಸುಜಾತ ಮಲ್ಲಯ್ಯ ಮಠಪತಿ ರವರು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಪ್ರಾಥಮಿಕ ಶಾಲೆಗಳು ಹಾಗೂ ಒಂದು ಪ್ರೌಢಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮೂರು ಶಾಲೆಗಳ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿಯರು ಶಿಕ್ಷಕರು ನೀಡಿದ ಮಾರ್ಗದರ್ಶನದ ಮೇರೆಗೆ ವಿವಿಧ ಪರಿಕಲ್ಪನೆ ಅಡಿ ವಿಜ್ಞಾನ ಮಾದರಿಗಳನ್ನು ಯಾವುದೇ ವೆಚ್ಚವಿಲ್ಲದ ಅಥವಾ ಕಡಿಮೆ ವೆಚ್ಚದ ವಸ್ತುಗಳನ್ನು ಬಳಕೆ ಮಾಡಿಕೊಂಡು ತಯಾರಿಸಿದ್ದರು. ಅಲ್ಲದೆ ತಾವು ತಯಾರಿಸಿದ ಮಾದರಿ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಭಾರತ ಹಾಗೂ ಕರ್ನಾಟಕ ಸಂಬಂಧಿಸಿದಂತೆ ಭೌಗೋಳಿಕ ಪ್ರಾಕೃತಿಕ ರಾಜಕೀಯ ವಿವಿಧ ಪರಿಕಲ್ಪನೆ ಅಡಿಯಲ್ಲಿ ನಕ್ಷೆಗಳನ್ನು ತಯಾರಿಸಿ ಆ ಬಗ್ಗೆ ಪ್ರದರ್ಶನದಲ್ಲಿ ಸಭಿಕರಿಗೆ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿಯನ್ನು ಮಕ್ಕಳು ನೀಡಿದರು.
ಗಾಳಿಪಟ ತಯಾರಿಸಿ ಹಾರಿಸುವ ಸ್ಪರ್ಧೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ತರಗತಿವಾರು 27 ವಿದ್ಯಾರ್ಥಿಗಳಿಗೆ ಹಾಗೂ ಗಣಿತ ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ 24 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಜ್ಞಾನ ಮಾದರಿ ಹಾಗೂ ನಕ್ಷೆಗಳ ತಯಾರಿಕೆ ಯಲ್ಲಿ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರುಗಳೊಂದಿಗೆ ವಿದ್ಯಾರ್ಥಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ ಬಸವರಾಜ ಗಾಣಿಗೇರ ಹಾಗೂ ಗ್ರಾಮ ಪಂಚಾಯತಿಯ ಕಾರ್ಯಶೈಲಿಯ ಬಗ್ಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರದರ್ಶನದಲ್ಲಿ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಶಿಕ್ಷಕರು ಶಿಕ್ಷಕಿಯರು ವಿದ್ಯಾರ್ಥಿಗಳು ಗ್ರಾಮದ ನಾಗರಿಕರು ಭಾಗವಹಿಸಿದ್ದರು.