

ಗುರುಪುರ: ದೇಶ ಕಾಯುವ ಯೋಧರು ಮತ್ತು ರೈತರು ಯಾವತ್ತೂ ಚಳಿ-ಮಳೆ-ಬಿಸಿಲಿಗೆ ಹೆದರುವುದಿಲ್ಲ. ಅಂತೆಯೇ ಮಕ್ಕಳು ಜೀವನದಲ್ಲಿ ಕಷ್ಟ-ಸುಖ ಸಮಾನವಾಗಿ ಸ್ವೀಕರಿಸಿ, ಪ್ರಬುದ್ಧ ಭಾರತ ನಿರ್ಮಾಣದ ನಿರ್ಮಾತೃಗಳಾಗಬೇಕು. ಸೋಲು, ನೋವು ಸಮಾನವಾಗಿ ಸ್ವೀಕರಿಸಿ ಛಲ ಹಾಗೂ ಆತ್ಮವಿಶ್ವಾದಿಂದ ಮುನ್ನಡೆಯಿರಿ ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಹೇಳಿದರು.
ದ.ಕ. ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ದಕ್ಷಿಣ ವಲಯ, ಕೈಕಂಬ ಕಿನ್ನಿಕಂಬಳದ ರೋಸಾ ಮಿಸ್ತಿಕಾ ಪ್ರೌಢಶಾಲಾ ಸಹಯೋಜ, ರೋಸಾ ಮಿಸ್ತಿಕಾ ಹಳೇ ವಿದ್ಯಾರ್ಥಿ ಸಂಘ ಮತ್ತು ಲಯನ್ಸ್ ಕ್ಲಬ್ ಗುರುಪುರ ಕೈಕಂಬ ವಲಯದ ಪ್ರಾಯೋಜಕತ್ವದಲ್ಲಿ ಬುಧವಾರ ರೋಸಾ ಮಿಸ್ತಿಕಾ ಶಾಲಾ ಮೈದಾನದಲ್ಲಿ ಗುರುಪುರ ಹೋಬಳಿ ಮಟ್ಟದ ಪ್ರೌಢಶಾಲಾ ಖೋ-ಖೋ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ರೋಸಾ ಮಿಸ್ತಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕಿ ಸಿಸ್ಟರ್ ರೋಸ್ ಲಿಟಾ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್ ಪ್ರಸ್ತಾವಿಕವಾಗಿ ಮಾತನಾಡಿದರು. ರೋಸಾ ಮಿಸ್ತಿಕಾ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಲೀನಾ ಪಿರೇರಾ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜೆಫ್ರಿಯನ್ ತಾವ್ರೊ, ಸಂಘದ ಕೋಶಾಧಿಕಾರಿ ಮೆಲ್ವಿನ್ ಸಲ್ಡಾನ, ಜತೆ ಕಾರ್ಯದರ್ಶಿ, ತಾಪಂ ಮಾಜಿ ಸದಸ್ಯ ಸುನೀಲ್ ಜಿ., ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಕಡ್ತಲ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಗೀತಾ, ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮರಿಸ್ಸಾ ಲೂಸಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವೀಣಾ ಆರನ್ಹಾ, ರೋಸಾ ಮಿಸ್ತಿಕಾ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಅನಿತಾ ಲಿಡಿಯಾ, ಡಿಇಡಿ ಪ್ರಾಂಶುಪಾಲೆ ಲವಿನಾ ಲೋಬೊ, ನಿವೃತ್ತ ದೈಹಿಕ ಶಿಕ್ಷಕ ಡೊನಾಲ್ಡ್ ಲೋಬೊ, ಶಿಕ್ಷಕರು, ಶಿಕ್ಷಕೇತರ ವರ್ಗ, ತೀರ್ಪುಗಾರರು, ದೈಹಿಕ ಶಿಕ್ಷಕರು, ಸಹಾಯಕರು ಇದ್ದರು.
ಸಿಸ್ಟರ್ ಮರಿಸ್ಸಾ ಲೂಸಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪ್ರಮೋದ್ ನಿರೂಪಿಸಿದರು. ಗೋಪಾಲ್ ಸಹಕರಿಸಿದರು. ರೋಸಾ ಮಿಸ್ತಿಕಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲ್ಯಾನ್ಸಿ ಸ್ವಿಕೇರಾ ವಂದಿಸಿದರು.