

ತುಮಕೂರು: ಅನ್ನಭಾಗ್ಯ ಯೋಜನೆಗೆ ಭೇಕಾಗಿರುವ 1.50 ಲಕ್ಷ ಟನ್ ಅಕ್ಕಿಯನ್ನು ಸರಬರಾಜು ಮಾಡಲು ಛತ್ತೀಸ್ಗಢ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.
ಸೋಮವಾರ ತುಮಕೂರಿನಲ್ಲಿ ಈ ಕುರಿತು ಮಾತನಾಡಿದ ಸಚಿವ ಪರಮೇಶ್ವರ್ ಅಕ್ಕಿ ಕೊಡಲು ಛತ್ತೀಸ್ಗಢ ಸರ್ಕಾರ ಒಪ್ಪಿದ್ದು, ಅಲ್ಲಿಂದ ರಾಜ್ಯಕ್ಕೆ ಸಾಗಾಣೆ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ಧಾರೆ.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಅಗತ್ಯದಷ್ಟು ಅಕ್ಕಿ ಒಂದು ರಾಜ್ಯದಲ್ಲಿ ಸಿಗುವುದಿಲ್ಲ. ಈ ಸಂಬಂಧ ಹಲವು ರಾಜ್ಯಗಳನ್ನು ಸಂಪರ್ಕಿಸಲಾಗಿದ್ದು, ಎಲ್ಲಿ ಸಿಕ್ಕರು ಖರೀದಿಸಲಾಗುವುದು. ಅಕ್ಕಿ ಜೊತೆಗೆ ರಾಗಿ ಜೋಳವನ್ನು ಸಹ ಕೊಡಲಾಗುವುದು. ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ಧಾರೆ.
ಭಾರತ ಆಹಾರ ನಿಗಮದವರು ಮೊದಲಿಗೆ ಅಕ್ಕಿ ಸ್ಟಾಕ್ ಇದೆ ಕೊಡುವುದಾಗಿ ಹೇಳಿ ಆ ನಂತರ ಉಲ್ಟಾ ಹೊಡೆದರು. FCIಗೆ ಈ ರೀತಿ ಮಾಡಲು ನಿರ್ದೇಶಿಸಿದವರು ಯಾರು. ಬದವರಿಗಾಗಿ ಮೀಸಲಿರುವ ಯೋಜನೆಯಲ್ಲೂ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಗೃಹ ಸಚಿವ ಪರಮೇಶ್ವರ ಕಿಡಿಕಾರಿದ್ಧಾರೆ.