

ಬೆಂಗಳೂರು: ದೇಶದ ಭವಿಷ್ಯಕ್ಕೆ ಕಾರಣೀಭೂತರಾಗುವ ಯುವ ಪೀಳಿಗೆಗೆ ಸೂಕ್ತ ಮಾರ್ಗ ತೋರಿಸುವುದೇ ನಿಜವಾದ ಇತಿಹಾಸ ಎಂದು ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ ಹೇಳಿದ್ದಾರೆ.
ಇಂಡಿಯನ್ ವರ್ಲ್ಡ್ ಕಲ್ಚರ್ನ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾಹಿತ್ಯ ಪ್ರಕಾಶನ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವರ್ಕರ್-2 ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.
ದೇಶದ ನೈಜ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದ ಕರ್ತವ್ಯ ಹಿರಿಯರ ಮೇಲಿದೆ. ಆದರೆ ಬಹಳ ಸಂದರ್ಭದಲ್ಲಿ ಇತಿಹಾಸದ ನೈಜತೆಯನ್ನು ಮರೆಮಾಚಿ ತಿರುಚಲ್ಪಟ್ಟ ಇತಿಹಾಸವನ್ನು ದಾಖಲಿಸುವ ಕೆಲಸ ನಡೆಯುತ್ತಿದೆ. ಅದಕ್ಕೆ ಅಪವಾದವೆಂಬಂತೆ ಅಂತರಾಷ್ಟ್ರೀಯ ಇತಿಹಾಸಕಾರ ಡಾ.ವಿಕ್ರಮ್ ಸಂಪತ್ ದೇಶದ ಇತಿಹಾಸದ ವಸ್ತುಸ್ಥಿತಿಯನ್ನು ಅನಾವರಣ ಮಾಡುತ್ತಿದ್ದಾರೆ. ಅದರ ಭಾಗವಾಗಿ ಈಗಾಗಲೇ ವೀರ ಸಾವರ್ಕರ್ ಅವರ ಜೀವನ ಚರಿತ್ರೆಯ ಮೊದಲನೇ ಭಾಗ ಬಿಡುಗಡೆಯಾಗಿದ್ದು, ಎರಡನೇ ಭಾಗ ಇಂದು ಬಿಡುಗಡೆಗೊಂಡಿದೆ.
ಸಾವರ್ಕರ್ ಮತ್ತು ಅವರ ಸಂಪೂರ್ಣ ಕುಟುಂಬ ಈ ದೇಶಕ್ಕಾಗಿ, ದೇಶದ ಅಭಿವೃದ್ಧಿಗಾಗಿ ನೀಡಿರುವ ಕೊಡುಗೆ, ತ್ಯಾಗ ಅಪಾರವಾಗಿದೆ. ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿರುವ ಸಾವರ್ಕರ್ ಇತಿಹಾಸವನ್ನು ಡಾ.ವಿಕ್ರಮ್ ಸಂಪತ್ ಯಥಾವತ್ತಾಗಿ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಸಾವರ್ಕರ್ ಅವರ ಸಹೋದರ ಬಾಬಾರಾವ್ ಸಾವರ್ಕರ್ ಕೂಡ ಹಿಂದುಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಹಿಂದುಗಳ ಮೇಲಿನ ಅನ್ಯಾಯದ ವಿರುದ್ಧ ಚಿಂತನೆ ನಡೆಸುತ್ತಿದ್ದ ಬಾಬಾರಾವ್ ಆರ್ಎಸ್ಎಸ್ ಸಂಸ್ಥಾಪಕರಾದ ಹೆಗ್ಡೆವಾರ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಆರ್ಎಸ್ಎಸ್ ಸ್ಥಾಪನೆ, ಧ್ವಜದ ವಿನ್ಯಾಸ, ಧ್ಯೇಯ ಧೋರಣೆಗಳ ರಚನೆಯಲ್ಲಿ ಬಾಬಾರಾವ್ ಪಾತ್ರ ಪ್ರಮುಖವಾಗಿತ್ತು. ಆರ್ಎಸ್ಎಸ್ ಶತಮಾನೋತ್ಸವದ ಸಂದರ್ಭದಲ್ಲೇ ಸಾವರ್ಕರ್ ಕೃತಿ ಬಿಡುಗಡೆ ಆಗಿರುವುದು ಮತ್ತೊಂದು ವಿಶೇಷ ಎಂದು ಬಾಬುಕೃಷ್ಣಮೂರ್ತಿ ಬಣ್ಣಿಸಿದರು.
1883ರಲ್ಲಿ ಜನಿಸಿದ ಸಾವರ್ಕರ್ ಬದುಕಿನ 1924ರವರೆಗಿನ ಕಾಲಘಟ್ಟವನ್ನು 1ನೇ ಸಂಪುಟದಲ್ಲಿ ಪ್ರಕಟಿಸಲಾಗಿದ್ದು, 1924 ರಿಂದ 1966ರವರೆಗಿನ ಕಾಲಘಟ್ಟವನ್ನು 2ನೇ ಸಂಪುಟದಲ್ಲಿ ಪ್ರಕಟಿಸಲಾಗಿದೆ. ಸಮಾರಂಭದಲ್ಲಿ ವಿಮರ್ಶಕ ಡಾ.ಬಿ.ಜಿ.ಹರೀಶ್ ಅವರ ‘ಶಿವನಿಗಾಗಿ ಕಾಯುತ್ತ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ನಂತರ ಡಾ.ವಿಕ್ರಮ್ ಸಂಪತ್ ಅವರೊಂದಿಗೆ ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ಅನುವಾದಕ ಡಾ.ನರೇಂದ್ರ ಕುಮಾರ, ಪ್ರಕಾಶಕ ಸುಬ್ರಮಣ್ಯ, ಹಿರಿಯ ಚಿಂತಕ ಕೃಷ್ಣಭಟ್, ಸಂಸ್ಕೃತ ವಿದ್ವಾಂಸ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಮತ್ತಿತರರು ಪಾಲ್ಗೊಂಡಿದ್ದರು.
"ಇತಿಹಾಸೆಂದರೆ ಕೇವಲ ಒಳ್ಳೆಯದನ್ನಷ್ಟೇ ದಾಖಲಿಸಬೇಕೆಂಬುದಲ್ಲ. ಇತಿಹಾಸ ಎಂಬ ಪದದ ಅರ್ಥವೇ ಹೀಗೆ ಆಗಿತ್ತು ಎಂಬುದಾಗಿದ್ದು, ಇದ್ದಿದ್ದನ್ನು ಇದ್ದ ಹಾಗೆ ದಾಖಲಿಸಬೇಕು. ಸಾವರ್ಕರ್ ಕುಟುಂಬದವರು ದೊಡ್ಡ ಜಮೀನ್ದಾರರಾಗಿದ್ದರೂ ಭಿಕ್ಷೆ ಬೇಡಿ ಬದುಕುವ ಸ್ಥಿತಿ ನಿರ್ಮಾಣವಾಗಿತ್ತು. ಈ ಎಲ್ಲ ಅಂಶಗಳನ್ನು ಯಥಾವತ್ತಾಗಿ ಪುಸ್ತಕದಲ್ಲಿ ದಾಖಲಿಸಿದ್ದೇನೆ." -ಡಾ.ವಿಕ್ರಮ್ ಸಂಪತ್, ಇತಿಹಾಸಕಾರ