ಧೋನಿ ಅಲ್ಲ! ಈತನ ಒಂದು ವಿಕೆಟ್​ ಇಡೀ ಪಂದ್ಯದ ದಿಕ್ಕನೇ ಬದಲಿಸಿತು; CSK ಸೋಲಿಗೆ ಕಾರಣ ತಿಳಿಸಿದ ಕೈಫ್

ವಿಜಯವಾಣಿ - 2025-03-31T164357.727
Published on

CSK: ಭಾನುವಾರ (ಮಾರ್ಚ್​ 30) ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ 11ನೇ ಐಪಿಎಲ್​ ಪಂದ್ಯದಲ್ಲಿ ಆರ್​ಆರ್​ 6 ರನ್​ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಧೋನಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದೇ ಆದರೂ ಗೆಲುವಿನ ಕೇಕೆ ಹಾಕಲು ಸಾಧ್ಯವಾಗಲಿಲ್ಲ. ಒತ್ತಡದಲ್ಲಿ ಸಿಲುಕಿದ್ದ ತಂಡಕ್ಕೆ ಧೋನಿ ಆಸರೆಯಾಗಲಿದ್ದಾರೆ ಎಂದೇ ಭಾವಿಸಿದ್ದ ಫ್ಯಾನ್ಸ್​ಗೆ ಅವರ ಔಟ್​ ಗೆಲುವಿನ ಭರವಸೆಯನ್ನು ಛಿದ್ರಗೊಳಿಸಿತು. ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿ 11 ಎಸೆತಗಳಲ್ಲಿ 16 ರನ್ ಗಳಿಸಿ ಧೋನಿ ಔಟಾದರು.

ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಸಿಎಸ್​ಕೆ ನಂತರದಲ್ಲಿ ಆರ್​ಸಿಬಿ ವಿರುದ್ಧ ಎರಡನೇ ಸೋಲನ್ನು ಅನುಭವಿಸಿತು. ಇದು ಹೀನಾಯ ಸೋಲಾಗಿತ್ತು. ಇದರ ಬೆನ್ನಲ್ಲೇ ಮೂರನೇ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಿದ ಸಿಎಸ್​ಕೆ, ಈ ಪಂದ್ಯದಲ್ಲಿಯೂ ಸೋಲುಂಡಿತು. ಇದು ಫ್ರಾಂಚೈಸಿಯ ಅಭಿಮಾನಿಗಳನ್ನು ಅಕ್ಷರಶಃ ಬೇಸರಕ್ಕೆ ದೂಡಿತು. ರುತುರಾಜ್ ಪಡೆ ಸೋತ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಹಿರಿಯ ಆಟಗಾರ ಮೊಹಮ್ಮದ್​ ಕೈಫ್​, "ಇಡೀ ಪಂದ್ಯದ ಲೆಕ್ಕಾಚಾರ ಬದಲಿಸಿದ್ದೇ ಒಬ್ಬ ಆಲ್​ರೌಂಡರ್ ವಿಕೆಟ್"​ ಎಂದು ಹೇಳಿದ್ದಾರೆ.

"ಸಿಎಸ್​​ಕೆಗೆ ಬಲ ತುಂಬುವಂತ ಆಲ್​ರೌಂಡರ್​ ಅಂದರೆ ಅದು ಶಿವಂ ದುಬೆ. ಯಾವಾಗ ಶಿವಂ ಅವರ ವಿಕೆಟ್​ ಪತನವಾಯಿತೋ, ಆ ಕ್ಷಣವೇ ಪಂದ್ಯದ ಲೆಕ್ಕಾಚಾರ ತಲೆಕೆಳಗಾಯಿತು. ಈ ವೇಳೆ ರಿಯಾನ್ ಪರಾಗ್ ಅತ್ಯುತ್ತಮ ಕ್ಯಾಚ್ ಹಿಡಿದರು. 18ನೇ ಓವರ್​ನಲ್ಲಿ ಮಹೀಶ್​ ತೀಕ್ಷಣ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ತಮ್ಮ ಓವರ್​ನಲ್ಲಿ ಕೇವಲ 6 ರನ್​ ಮಾತ್ರ ಕೊಟ್ಟರು. ಅದು ಗಮನಾರ್ಹ" ಎಂದರು. ಇನ್ನು ಸಂಜಯ್​ ಬಂಗಾರ್​ ಪ್ರತಿಕ್ರಿಯಿಸಿ, "ಪವರ್​ಪ್ಲೇ ಅಲ್ಲೇ ಸಿಎಸ್​ಕೆ ಪಂದ್ಯವನ್ನು ಕಳೆದುಕೊಂಡಿತು" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net