ಅಕ್ರಮ ಮದ್ಯ ಮಾರಿದರೆ ರೌಡಿಶೀಟರ್ ಪ್ರಕರಣ

HYR hartikote village 27
Published on

ಹಿರಿಯೂರು: ಗಡಿಗ್ರಾಮಗಳ ಕಿರಾಣಿ ಅಂಗಡಿ, ಹೋಟೆಲ್‌ಗಳಲ್ಲಿ ಅಕ್ರಮ ಮದ್ಯ ಮಾರಾಟ ದೂರು ಕೇಳಿ ಬಂದಿದ್ದು, ತಪ್ಪಿತಸ್ಥರ ವಿರುದ್ಧ ರೌಡಿಶೀಟರ್ ಪ್ರಕರಣ ದಾಖಲಿಸಲಾಗುವುದು ಎಂದು ಅಬ್ಬಿನಹೊಳೆ ಪಿಎಸ್‌ಐ ಚಂದ್ರಶೇಖರ್ ಎಚ್ಚರಿಸಿದ್ದಾರೆ.

ತಾಲೂಕಿ ಗಡಿ ಗ್ರಾಮಗಳಲ್ಲಿ ಕರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿ ಜನರಲ್ಲಿ ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.

ಜನರ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಕಾನೂನು ಉಲ್ಲಂಘಿಸಿ ಅನವಶ್ಯಕವಾಗಿ ಗುಂಪು ಸೇರುವುದು, ಓಡಾಟ ಇತರೆ ಚಟುವಟಿಕೆಗಳು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಂಧ್ರಪ್ರದೇಶ ಗಡಿ ಗ್ರಾಮದ ಜನತೆ ರಾಜ್ಯದ ಗಡಿ ಪ್ರವೇಶಿಸಿದಂತೆ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಬೇಲಿ ಹಾಕಿ ರಸ್ತೆ ಬಂದ್ ಮಾಡಿರುವುದು ಸ್ವಾಗತಾರ್ಹ. ಹೊರ ರಾಜ್ಯದಿಂದ ಬಂದಿರುವ ವ್ಯಕ್ತಿಗಳ ಬಗ್ಗೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು.

ಅಬ್ಬಿನಹೊಳೆ, ಈಶ್ವರಗೆರೆ, ಕೋಡಿಹಳ್ಳಿ, ಇಕ್ಕನೂರು, ವೇಣುಕಲ್ಲುಗುಡ್ಡ, ಹರಿಯಬ್ಬೆ, ಚಿಲ್ಲಹಳ್ಳಿ, ರಂಗೇನಹಳ್ಳಿ, ಸೂಗೂರು, ಬೇತೂರು, ಖಂಡೇನಹಳ್ಳಿ, ಧರ್ಮಪುರ, ಶ್ರವಣಗೆರೆ, ಪಿ.ಡಿ.ಕೋಟೆ ಇತರೆಡೆ ಕರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಪೊಲೀಸ್ ಸಿಬ್ಬಂದಿ ಪ್ರಸನ್ನ, ನಾಗರಾಜ್, ನಂಜೇಗೌಡ, ಗ್ರಾಪಂ.ಅಧ್ಯಕ್ಷ ಮಂಜುನಾಥ್, ಸದಸ್ಯರಾದ ತಿಮ್ಮರಾಯ, ಜಿಯಾವುಲ್ಲಾ, ಲಾಲಾಸಾಬ್, ನಾಗರಾಜ್, ವೆಂಕಟೇಶ್, ಗೋವಿಂದರಾಜ್, ಗ್ರಾಮಸ್ಥರಾದ ತಿಮ್ಮರಾಜ್, ಮಹಾಂತೇಶ್, ತಿಮ್ಮರಾಯಪ್ಪ, ಚಿದಾನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net