

ಬೆಂಗಳೂರು: ನಗರದಲ್ಲಿ ರಸ್ತೆ ಹಾಗೂ ಬೃಹತ್ ನೀರುಗಾಲುವೆಗಳ ನಿರ್ವಹಣೆಗಾಗಿ ತಕ್ಷಣವೇ ಗುತ್ತಿಗೆದಾರರನ್ನು ನೇಮಿಸಿಕೊಳ್ಳುವಂತೆ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಪಾಲಿಕೆ ಕಮಿಷನರ್ಗಳಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ ಐದೂ ಪಾಲಿಕೆಗಳ ಆಯುಕ್ತರೊಂದಿಗೆ ಮಂಗಳವಾರ ವರ್ಚ್ಯುವಲ್ ಮೂಲಕ ನಡೆಸಿದ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದರು. ಆಯಾ ಪಾಲಿಕೆಗಳಲ್ಲಿನ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಕೇಂದ್ರಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಎಎಂಸಿ ತಂಡಗಳನ್ನು ರದ್ದುಪಡಿಸಿ, ಪಾಲಿಕೆ ಮಟ್ಟದಲ್ಲೇ ಪ್ರತ್ಯೇಕವಾಗಿ ಹೊಸ ಗುತ್ತಿಗೆದಾರರನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದರು.
ಆಯಾ ನಗರ ಪಾಲಿಕೆಗಳ ಕಚೇರಿಗಳಿಗಾಗಿ ಕಟ್ಟಡ ನಿರ್ಮಿಸಲು ಸೂಕ್ತ ಖಾಲಿ ಜಾಗಗಳನ್ನು ಗುರುತಿಸಬೇಕು. ಬಳಿಕ ಲಭ್ಯ ಜಾಗ ಮತ್ತು ಕಚೇರಿ ಸ್ಥಳದ ಅವಶ್ಯಕತೆ ಆಧರಿಸಿ, ಹೊಸ ಪಾಲಿಕೆ ಕಟ್ಟಡಗಳ ವಿನ್ಯಾಸಗಳನ್ನು ಅಂತಿಮಗೊಳಿಸಲು ಜಿಬಿಎಯಿಂದ ಕೂಡಲೆ ಆಸಕ್ತಿ ವ್ಯಕ್ತಪಡಿಸುವಿಕೆ ಟೆಂಡರ್ ಆಹ್ವಾನಿಸಲು ಸೂಚನೆ ನೀಡಿದರು.
ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ:
ರಸ್ತೆ ಮೂಲಸೌಕರ್ಯ, ಕಟ್ಟಡಗಳು, ಬೃಹತ್ ನೀರುಗಾಲುವೆ ಸೇರಿ ಇನ್ನಿತರ ವಿಭಾಗಳ ಕೇಂದ್ರೀಕೃತ ಕಚೇರಿಗಳಿಂದ ಕಡತಗಳನ್ನು ಆಯಾ ಸಂಬಂಧಪಟ್ಟ ನಗರ ಪಾಲಿಕೆಗಳಿಗೆ ಹಸ್ತಾಂತರ ಮಾಡುವ ಸಲುವಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ಅವುಗಳನ್ನು ತ್ವರಿತಗತಿಯಲ್ಲಿ ನಿಯಮಾನುಸಾರ ವಿಲೇವಾರಿ ಮಾಡುವಂತೆ ನಿರ್ದೇಶಿಸಿದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಮರುಸೇರ್ಪಡೆ:
ಜಿಬಿಎ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಅಂದಾಜು 35,000 ಮಕ್ಕಳನ್ನು ಗುರುತಿಸಲಾಗಿದೆ. ಆಯಾ ನಗರ ಪಾಲಿಕೆಗಳಲ್ಲಿ ಎಷ್ಟು ಮಕ್ಕಳು ಬರಲಿದ್ದಾರೆ ಎಂಬ ಪಟ್ಟಿ ನೀಡಲಾಗುವುದು. ಅದಕ್ಕಾಗಿ ವಾರ್ಡ್ ಹಾಗೂ ನಗರ ಪಾಲಿಕೆಗಳಲ್ಲಿ ಕಾರ್ಯಪಡೆ ಸಮಿತಿ ರಚಿಸಿಕೊಂಡು ಎಲ್ಲ ಮಕ್ಕಳನ್ನು ಪುನಃ ಶಾಲೆಗೆ ಕರೆತುವ ಪ್ರಯತ್ನಕ್ಕೆ ಆದ್ಯತೆ ನೀಡಬೇಕು ಎಂದು ಆಯುಕ್ತರುಗಳಿಗೆ ಸಲಹೆ ನೀಡಿದರು.
ಈ ವೇಳೆ ಜಿಬಿಎ ವಿಶೇಷ ಆಯುಕ್ತರು, ನಗರ ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ಡಿ.ಎಸ್.ರಮೇಶ್, ಪಿ.ಸುನೀಲ್ ಕುಮಾರ್, ಕೆ.ಎನ್. ರಮೇಶ್, ಡಾ. ಕೆ.ವಿ.ರಾಜೇಂದ್ರ, ಅಪರ ಆಯುಕ್ತರು, ಜಂಟಿ ಆಯುಕ್ತರು, ಬಿ-ಸ್ಮೈಲ್ನ ತಾಂತ್ರಿಕ ನಿರ್ದೇಶಕರು, ಮುಖ್ಯ ಅಭಿಯಂತರರು ಹಾಜರಿದ್ದರು.
ಸಹಾಯವಾಣಿ ಮುಂದುವರಿಕೆ:
ಜಿಬಿಎ ಅಸ್ತಿತ್ವಕ್ಕೆ ಬಂದ ನಂತರ ಹಿಂದಿನ ಬಿಬಿಎಂಪಿಯಲ್ಲಿ ಸಾರ್ವಜನಿಕರ ಕುಂದುಕೊರತೆಗೆ ಮೀಸಲಾಗಿದ್ದ ಸಹಾಯವಾಣಿ ಸಂಖ್ಯೆ - 1533 ಮುಂದುವರಿಯಲಿದೆ. ಜತೆಗೆ 5 ಪಾಲಿಕೆಗಳಲ್ಲಿ ನಿಯಂತ್ರಣ ಕೊಠಡಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ. ಅವುಗಳನ್ನು ಆಯಾ ಪಾಲಿಕೆಗಳ ಕೇಂದ್ರ ಕಚೇರಿಯಲ್ಲಿ ಬಳಕೆಯಾಗುವ ಸಹಾಯವಾಣಿ ಸಂಖ್ಯೆಗಳನ್ನು ನಾಗರಿಕರಿಗೆ ತಿಳಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.