

ಶಿವಮೊಗ್ಗ: ರಾಜ್ಯ ಸರ್ಕಾರ ಈ ಬಾರಿ ಮಂಡಿಸಿರುವ ಬಜೆಟ್ನಿಂದ ಹಿಂದುಗಳಿಗೆ ಹಾಗೂ ಹಿಂದುಳಿದವರಿಗೆ ಏನೂ ಪ್ರಯೋಜನವಿಲ್ಲ. ರಾಜಕೀಯ ಕಾರಣಕ್ಕಾಗಿ ಒಂದು ಧರ್ಮದವರನ್ನು ಓಲೈಸುವ, ಮುಸ್ಲಿಂ ತುಷ್ಟೀಕರಣದ ಬಜೆಟ್ ಇದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕಿಡಿಕಾರಿದರು.
ರಾಜ್ಯ ಸರ್ಕಾರದ ಬಜೆಟ್ ಖಂಡಿಸಿ ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಜಿಲ್ಲಾ ಬಿಜೆಪಿಯಿಂದ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಹೆಸರಿನಲ್ಲಿ ಉಚಿತ ಉಡುಗೊರೆ ನೀಡುವ ಸರ್ಕಾರ ಇನ್ನೊಂದೆಡೆ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ದೂರಿದರು.
ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಈ ಬಾರಿ ಅತಿ ಹೆಚ್ಚು ಮೊತ್ತದ ಬಜೆಟ್ ಮಂಡನೆಯಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಬಡವರ ಆದಾಯವನ್ನು ಕಿತ್ತುಕೊಂಡೇ ಸರ್ಕಾರ ನಡೆಸುವ ಪ್ರಯತ್ನ ಬಜೆಟ್ನಲ್ಲಿ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಶುಲ್ಕ ಶೇ.300ರಷ್ಟು ಹೆಚ್ಚಳವಾಗಿದೆ. ಎಲ್ಲರ ಮನೆಗಳಿಗೆ ಡಿಜಿಟಲ್ ವಿದ್ಯುತ್ ಮೀಟರ್ ಅಳವಡಿಕೆ ಹೆಸರಿನಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ರೈತರ ಅಕ್ರಮ -ಸಕ್ರಮ ಪಂಪ್ಸೆಟ್ಗಳ ನೋಂದಣಿಗೆ 20 ಸಾವಿರ ರೂ. ನೀಡಿದರೆ ಸಾಕಿತ್ತು. ಈಗ ಅದಕ್ಕೆ 2- 3 ಲಕ್ಷ ರೂ. ತೆರಬೇಕಾಗಿದೆ ಎಂದು ಹರಿಹಾಯ್ದರು.
ಉದ್ಯೋಗ ಸೃಷ್ಟಿಗೆ ಬಜೆಟ್ನಲ್ಲಿ ಒತ್ತು ನೀಡಿಲ್ಲ. ಕೊಟ್ಟಿದ್ದನ್ನು ಹಾಗೆಯೇ ಕಿತ್ತುಕೊಳ್ಳುತ್ತಿರುವುದು ಈ ಬಜೆಟ್ನ ಸಾಧನೆಯಾಗಿದೆ. ಮಹಿಳಾ ದಿನಾಚರಣೆ ಸಂದರ್ಭದಲ್ಲೇ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ರಸ್ತೆಗಿಳಿದು ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಗ್ಯಾರಂಟಿಯನ್ನೇ ಅಭಿವೃದ್ಧಿಯನ್ನಾಗಿಸುವ ಮನಸ್ಥಿತಿಯನ್ನು ಕಾಂಗ್ರೆಸ್ ಪ್ರದರ್ಶಿಸುತ್ತಿದೆ. ಅಭಿವೃದ್ಧಿ ಯೋಜನೆಗಳೇ ಗ್ಯಾರಂಟಿ ಆಗಬೇಕು. ಅದು ಈ ಬಜೆಟ್ನಲ್ಲಿ ಕಾಣುತ್ತಿಲ್ಲ. ಇದೊಂದು ಹಿಂದುತ್ವ ವಿರೋಧಿ ಬಜೆಟ್ ಆಗಿದ್ದು, ಹಲಾಲ್ ಬಜೆಟ್ ಎನ್ನಲಡ್ಡಿಯಿಲ್ಲ ಎಂದು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡಲು 4,500 ಕೋಟಿ ರೂ.ಗೂ ಅಧಿಕ ಅನುದಾನವನ್ನು ಆ ಸಮುದಾಯಕ್ಕೆ ನೀಡಿದ್ದಾರೆ. ಅವರಿಗೆ ರಾಜ್ಯದಲ್ಲಿ ಮುಜರಾಯಿ ಇಲಾಖೆ ಇದೇ ಎನ್ನುವುದು ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಶಿವಮೊಗ್ಗದ ಅರಕೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಈ ಹಿಂದೆ ಎರಡು ಕೋಟಿ ರೂ. ನೀಡಲಾಗಿತ್ತು. ಅದನ್ನೂ ಸರ್ಕಾರ ವಾಪಸ್ ತೆಗೆದುಕೊಂಡಿದೆ. ಬಿಜೆಪಿ ಸರ್ಕಾರದಲ್ಲಿ ಹಿಂದುಗಳ ದೇವಸ್ಥಾನದ ಅಭಿವೃದ್ಧಿಗೆ 15 ಕೋಟಿ ರೂ. ಬಿಡುಗಡೆಯಾಗಿ ಅದರಲ್ಲಿ 7.5 ಕೋಟಿ ರೂ. ವೆಚ್ಚವಾಗಿದೆ. ಬಾಕಿ ಉಳಿದ ಹಣ ಕೇಳಿದರೆ ಸರ್ಕಾರದಲ್ಲಿ ಹಣವಿಲ್ಲ ಎಂಬ ಮಾಹಿತಿ ದೊರೆಯುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಬಿ.ಹರಿಕೃಷ್ಣ, ಶಿವರಾಜ್, ಮಾಲತೇಶ್, ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ, ಅನಿತಾ ರವಿಶಂಕರ್, ಮಂಗಳಾ ಮುಂತಾದವರಿದ್ದರು.