

temple ; ಅಮೆರಿಕದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆದ ಮತ್ತೊಂದು ಘಟನೆಯಲ್ಲಿ, ಇಂಡಿಯಾನಾದ ಗ್ರೀನ್‌ವುಡ್ ನಗರದಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯವನ್ನು ಭಾರತ ವಿರೋಧಿ ಗೀಚುಬರಹದಿಂದ ವಿರೂಪಗೊಳಿಸಲಾಗಿದೆ.
ಚಿಕಾಗೋದಲ್ಲಿರುವ ಭಾರತೀಯ ದೂತಾವಾಸವು ಸ್ಥಳೀಯ ಸಮುದಾಯ ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದೆ. "ಇಂಡಿಯಾದ ಗ್ರೀನ್‌ವುಡ್‌ನಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯದ ಮುಖ್ಯ ಸಂಕೇತ ಫಲಕವನ್ನು ಅಪವಿತ್ರಗೊಳಿಸಿರುವುದು ಖಂಡನೀಯ" ಎಂದು ದೂತಾವಾಸವು ಹೇಳಿಕೆಯಲ್ಲಿ ತಿಳಿಸಿದೆ. ಭಕ್ತಾದಿಗಳು, ಸ್ಥಳೀಯ ನಾಯಕರು ಮತ್ತು ಗ್ರೀನ್‌ವುಡ್ ಮೇಯರ್ ಅವರನ್ನು ಭೇಟಿಯಾಗಿ ಏಕತೆ, ಒಗ್ಗಟ್ಟು ಮತ್ತು ಜಾಗರೂಕತೆಗಾಗಿ ಕರೆ ನೀಡಿದೆ ಎಂದು ದೂತಾವಾಸವು ಹೇಳಿಕೆಯಲ್ಲಿ ತಿಳಿಸಿದೆ.
ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಗೀಚುಬರಹ ಕಂಡುಬಂದಿದೆ. ಆಗಸ್ಟ್ 10 ರ ರಾತ್ರಿ ವರದಿಯಾದ ಈ ಘಟನೆಯು, ಖಲಿಸ್ತಾನ್ ಪರ ಪ್ರತ್ಯೇಕತಾವಾದಿಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಅಮೆರಿಕದಲ್ಲಿ ಹಿಂದೂ ದೇವಾಲಯದ ಮೇಲೆ ನಡೆದ ನಾಲ್ಕನೇ ದಾಳಿಯಾಗಿದೆ ಎಂದು ವರದಿಯಾಗಿದೆ. ಹಿಂದೂ ಅಮೇರಿಕನ್ ಫೌಂಡೇಶನ್ ಸಾಮಾಜಿಕ ಮಾಧ್ಯಮದಲ್ಲಿ ವಿರೂಪಗೊಂಡ ಗೋಡೆಗಳ ಚಿತ್ರಗಳನ್ನು ಹಂಚಿಕೊಂಡಿದೆ. ಇನ್ನೂ ಈ ದೇವಾಲಯದ ಧ್ವಂಸ ಕೃತ್ಯವನ್ನು ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತೀವ್ರವಾಗಿ ಖಂಡಿಸಿದ್ದಾರೆ.
(ಏಜೆನ್ಸೀಸ್)
ಈ ವರ್ಷದ ಮಾರ್ಚ್‌ನಲ್ಲಿ, ದಕ್ಷಿಣ ಕ್ಯಾಲಿಫೋರ್ನಿಯಾದ ಒಂದು ಪ್ರಸಿದ್ಧ ಹಿಂದೂ ದೇವಾಲಯವನ್ನು ಹಿಂದೂ ವಿರೋಧಿ ಮತ್ತು ಭಾರತ ಸರ್ಕಾರದ ವಿರೋಧಿ ಸಂದೇಶಗಳನ್ನು ಹೊಂದಿರುವ ಗೀಚುಬರಹದಿಂದ ಧ್ವಂಸಗೊಳಿಸಲಾಯಿತು. ಈ ಘಟನೆಯನ್ನು ಭಾರತದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.